ಕುಂದಾಪುರ: ಕೊಲ್ಲೂರು ದೇವಸ್ಥಾನದಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳಾ ಆರೋಪಿಗಳನ್ನು ಕೊಲ್ಲೂರು ಪೊಲೀಸರು ಪ್ರಕರಣ ದಾಖಲಾದ 24 ಗಂಟೆ ಒಳಗಡೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನೇತ್ರಾವತಿ (33), ಶಾರದ (50) ಹಾಗೂ ದುರ್ಗಮ್ಮ (44) ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ: ಪ್ರಜೋಶ್ ಹಾಗೂ ಅವರ ಪತ್ನಿ ನಿಮಿಶಾ ಎನ್ನುವ ದಂಪತಿ ಜು.5ರಂದು ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು, ದೇವಸ್ಥಾನದ ಒಳಗೆ ದೇವರ ದರ್ಶನ ಪಡೆದು ಹೊರಾಂಗಣಕ್ಕೆ ಬಂದಿದ್ದು ಆಗ ನಿಮಿಶಾ ತನ್ನ ಬಳಿ ಇದ್ದ ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗ್‌ನ ಜಿಪ್ ತೆರೆದುಕೊಂಡಿದ್ದು, ಅದರಲ್ಲಿದ್ದ 80 ಸಾವಿರ ಹಣವಿದ್ದ ಪರ್ಸ್ ಕಳವಾಗಿರುವುದು ಕಂಡುಬಂತು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ ನಿರ್ದೇಶನದಂತೆ ತಕ್ಷಣ ಕಾರ್ಯಪ್ರವೃತ್ತರಾದ ಕೊಲ್ಲೂರು ಪೊಲೀಸ್ ಠಾಣಾ ಉಪನಿರೀಕ್ಷಕರಾದ ವಿನಯ ಎಂ.ಕೊರ್ಲಹಳ್ಳಿ, ಭಿಮಾಶಂಕರ್, ಸಿಬ್ಬಂದಿಗಳಾದ ರತ್ನಾಕರ, ಸಂತೋಷ, ಕುಂದಾಪುರ ಠಾಣಾ ಸಿಬ್ಬಂದಿ ಘನಶ್ಯಾಮ್, ಪದ್ಮಾವತಿ ಹಾಗೂ ಬೈಂದೂರು ಠಾಣೆಯ ಚಂದ್ರಶೇಖರ ತನಿಖೆ ನಡೆಸಿದ್ದು, ಸಿಸಿ ಕ್ಯಾಮರಾ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದ ವಿವಿಧ ಫೊಟೋಗಳು ಮತ್ತು ತಾಂತ್ರಿಕ ಸಹಾಯದಿಂದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಆರೋಪಿಗಳಲ್ಲಿ ದುರ್ಗಮ್ಮ ಮೇಲೆ ಲಸ್ಕರ್ ಪೊಲೀಸ್ ಠಾಣೆ ಮೈಸೂರು ಹಾಗೂ ಓಲ್ಡ್ ಟೌನ್ ಪೊಲೀಸ್ ಠಾಣೆ ಭದ್ರಾವತಿಯಲ್ಲಿ ತಲಾ ಒಂದೊಂದು ಪ್ರಕರಣ, ಶಾರದ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು ಮತ್ತು ಅಶೋಕಪುರಂ ಪೊಲೀಸ್ ಠಾಣೆ ಮೈಸೂರು ಠಾಣೆಯಲ್ಲಿ 1 ಕಳ್ಳತನ ಪ್ರಕರಣ ಸೇರಿ ಒಟ್ಟು 3 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.