ಕುಂದಾಪುರ: ತಾಲೂಕಿನ ವಕ್ವಾಡಿ ಗ್ರಾಮದ ಹಳೆಯಮ್ಮ, ಚಿಕ್ಕಮ್ಮ ಮತ್ತು ಹೈಗುಳಿ ಪರಿವಾರ ದೈವಸ್ಥಾನ ಹಾಗೂ ನಾಗದೇವರ ಸನ್ನಿಧಿಯ ಪ್ರಥಮ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ನಿರ್ಮಿಸಲಾದ ನೂತನ ಹಳೆಯಮ್ಮ ದೇವಿ ಸಭಾಭವನವನ್ನು ಶುಕ್ರವಾರ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ನಶಿಸಿಹೋಗಿದ್ದ ದೈವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿ ಅದರ ಒಂದನೇ ವರ್ಷದ ವರ್ದಂತಿಯ ಸಂದರ್ಭದಲ್ಲಿ ದಾನಿ ಪ್ರವೀಣ್ ಕುಮಾರ್ ಶೆಟ್ಟಿಯವರ ಸಹಕಾರದಲ್ಲಿ ಸಭಾಭವನ ನಿರ್ಮಿಸಿರುವುದು ಉತ್ತಮ ವಿಚಾರ. ದುಡಿಮೆಯ ಒಂದಷ್ಟು ಭಾಗವನ್ನು ಸಮಾಜಕ್ಕೆ ನೀಡುವ ಮನಸ್ಥಿತಿ ಎಲ್ಲರಲ್ಲೂ ಬೆಳೆಯಬೇಕು. ಊರಿನಲ್ಲಿ ದೇವಸ್ಥಾನ, ಶಾಲೆ ಅಭಿವೃದ್ಧಿಯಾದರೆ ಆ ಊರು ಪ್ರಗತಿ ಕಾಣಿಸುತ್ತದೆ. ದಾನಿಗಳು ಊರಿನ ಅಭಿವೃದ್ಧಿ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇಲ್ಲಿನ ಊರು ಹಾಗೂ ದೇವಸ್ಥಾನ ಸಂಪರ್ಕದ ರಸ್ತೆ ನಿರ್ಮಾಣಕ್ಕೆ ಆದ್ಯತೆ ಮೇರೆಗೆ ಕ್ರಮವಹಿಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಸಭಾಭವನ ನಿರ್ಮಾಣಕ್ಕೆ ಸಹಕರಿಸಿದ ಮುಖ್ಯ ದಾನಿ, ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ಅವರನ್ನು ದೈವಸ್ಥಾನ ಮತ್ತು ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಕರಾವಳಿಯಲ್ಲಿ ದೇವರು, ದೈವದ ಆರಾಧನೆಗೆ ಬಹಳಷ್ಟು ಮಹತ್ವವಿದೆ. ವರ್ಷದ ಹಿಂದೆ ಜೀರ್ಣೋದ್ಧಾರವಾದ ದೈವಸ್ಥಾನವನ್ನು ಇದೀಗ ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದೆಯೂ ಅಗತ್ಯ ಸಹಕಾರವನ್ನು ಊರಿನ ಅಭಿವೃದ್ದಿಗೆ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಧ್ಯಾಯ ಕರುಣಾಕರ ಶೆಟ್ಟಿ ಮೇಲ್ಮನೆ, ಬ್ಯಾಂಕ್ ಆಫ್ ಬರೋಡ ಕುಂಭಾಶಿ ಶಾಖೆಯ ಪ್ರಬಂಧಕ ಕರುಣಾಕರ ಶೆಟ್ಟಿ, ಅವತಾರಚಿಕ್ಕು ಹೆಗ್ಗಾರ್ ಬೈಲ್ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಲಾಡಿ ರಾಜೀವ ಶೆಟ್ಟಿ, ವಕ್ವಾಡಿ ಹಳೆಯಮ್ಮ ದೇವಿ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಶಾಂತರಾಮ ಶೆಟ್ಟಿ ಮೊದಲಾದವರಿದ್ದರು.
ಹಳೆಯಮ್ಮ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಶೆಟ್ಟಿ ಪಠೇಲರಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವನೀತಾ ಪ್ರಾರ್ಥಿಸಿದರು. ಅಕ್ಷತಾ ಗಿರೀಶ್ ಐತಾಳ ಕಾರ್ಯಕ್ರಮ ನಿರೂಪಿಸಿ, ದೈವಸ್ಥಾನದ ಪ್ರಧಾನ ಅರ್ಚಕರಾದ ಗಿರೀಶ್ ಐತಾಳ್ ವಂದಿಸಿದರು.
Comments are closed.