ಕರಾವಳಿ

ಉಡುಪಿ | ಸೂಕ್ತ ದಾಖಲೆಗಳಿಲ್ಲದ ಮೊಬೈಲ್‌ಗಳು ಪೊಲೀಸ್ ಇಲಾಖೆಗೆ ಹಸ್ತಾಂತರ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಮೊಬೈಲ್‌ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಮಾರಾಟಕ್ಕೆ ತಂದ ಸೂಕ್ತ ದಾಖಲೆಗಳಿಲ್ಲದ ಮೊಬೈಲ್ ಫೋನ್‌ಗಳನ್ನು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್‌ ಪದಾಧಿ ಕಾರಿಗಳು ಬುಧವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರಿಗೆ ಹಸ್ತಾಂತರಿಸಿದ್ದಾರೆ.

ಮೊಬೈಲ್‌ ಅಂಗಡಿಗಳಿಗೆ ಅಪರಿಚಿತರು ಮೊಬೈಲ್ ಮಾರಾಟ ಮಾಡಲು ಬಂದ ಸಂದರ್ಭ ಅಂಗಡಿಯ ಮಾಲಕರು ಸಂಶಯಗೊಂಡು, ಮೊಬೈಲ್ ಗಳನ್ನು ಸಂಚಾರ ಸಾಥಿ ಆಪ್ ಮೂಲಕ ಪರಿಶೀಲಿಸಿದ್ದರು. ಆಗ ಅವುಗಳು ಬ್ಲಾಕ್ ಲಿಸ್ಟ್‌ನಲ್ಲಿ ಇರುವುದು ಕಂಡುಬಂದಿತ್ತು. ಈ ಸಂಬಂಧ ಮೊಬೈಲ್‌ಗಳ ಸೂಕ್ತ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳನ್ನು ನೀಡದೇ ಇರುವುದರಿಂದ ಈ ಬಗ್ಗೆ ಹೆಚ್ಚಿನ ಅನುಮಾನ ವ್ಯಕ್ತವಾಗಿತ್ತು. ಅಂತಹ ಒಟ್ಟು ಏಳು ಮೊಬೈಲ್‌ಗಳನ್ನು ಅಸೋಸಿಯೇಷನ್‌ ಅಧ್ಯಕ್ಷ ವಿವೇಕ್ ಜಿ.ಸುವರ್ಣ ಹಾಗೂ ಸದಸ್ಯರಾದ ರಂಜಿತ್ ಶೆಟ್ಟಿ, ಸಂದೇಶ್‌, ಸುದರ್ಶನ್, ಗಣೇಶ್‌ ಹಾಗೂ ಅಭಿಷೇಕ್ ಜಿಲ್ಲಾ ಪೊಲೀಸ್‌ ಕಛೇರಿಗೆ ಆಗಮಿಸಿ ಜಿಲ್ಲಾ ಪೊಲೀಸ್‌ ಅಧೀಕ್ಷಕರವರಿಗೆ ಒಪ್ಪಿಸಿದರು. ಈ ಮೊಬೈಲ್‌ಗಳ ಮೂಲ ವಾರಸುದಾರರನ್ನು ಸಿಇಐಆ‌ರ್ ಪೋರ್ಟಲ್ ಮೂಲಕ ಪತ್ತೆಹಚ್ಚಿ, ಕಾನೂನು ಕ್ರಮದಂತೆ ಮೂಲ ಮಾಲಕರಿಗೆ ಹಸ್ತಾಂತರಿಸಲಾಗುವುದು ಎಸ್ಪಿ ಹರಿರಾಂ ಶಂಕ‌ರ್ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳು ಮೊಬೈಲ್ ಮಾರಾಟಕ್ಕೆ ಬಂದಲ್ಲಿ ಮೊದಲು ಸಂಚಾರ ಸಾಥಿ ಆಪ್‌ನಲ್ಲಿ ಪರಿಶೀಲನೆ ಮಾಡಬೇಕು. ಮೊಬೈಲ್ ಪರಿಶೀಲನೆಗಾಗಿ ಅಂಗಡಿ ಮಾಲಕರು ತಮ್ಮಸ್ವಂತ ಸಿಮ್ ಕಾರ್ಡ್ ಬಳಸದೇ, ಮೊಬೈಲ್ ನೀಡಿದ ಗ್ರಾಹಕರ ಸಿಮ್ ಕಾರ್ಡ್‌ನ್ನೇ ಬಳಸಬೇಕು. ಸೂಕ್ತ ದಾಖಲೆಗಳಿಲ್ಲದ ಮೊಬೈಲ್‌ಗಳನು ಖರೀದಿಸುವುದು ಅಥವಾ ಸ್ವೀಕರಿಸುವುದನ್ನು ತಪ್ಪಿಸಬೇಕು. ಯಾವುದೇ ಅನುಮಾನಾಸ್ಪದ ಮಾಹಿತಿ ಅಥವಾ ಈ ಮೇಲ್ಕಂಡ ರೀತಿಯಲ್ಲಿ ಮೊಬೈಲ್ ಮಾರಾಟಕ್ಕೆ ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು.-ಹರಿರಾಂ ಶಂಕ‌ರ್, ಎಸ್ಪಿ ಉಡುಪಿ

Comments are closed.