ಕರಾವಳಿ

ಕಾಪು | ಆಗ್ಗಾಗೆ ಜೊತೆಯಲ್ಲಿ ಕುಡಿಯುತ್ತಿದ್ದ 60 ವರ್ಷದ ಮಹಿಳೆಯನ್ನು ಕ್ಷುಲ್ಲಕ ಕಾರಣಕ್ಕೆ ಕೊ*ಲೆಗೈದ ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದ ಘಟನೆ ವರದಿಯಾಗಿದೆ. ವನಜಾ ಪೂಜಾರ್ತಿ (60) ಕೊಲೆಯಾದವರು‌.

ಕೊಲೆ ಪ್ರಕರಣ ಸಂಬಂಧ ಸ್ಥಳೀಯ ನಿವಾಸಿಗಳಾದ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ:  ಆರೋಪಿಗಳಾದ ವಲೇರಿಯನ್ ಮೆಂಡೊನ್ಸಾ ಹಾಗೂ ಪ್ರವೀಣ್ ಮೆಂಡೊನ್ಸಾ ಅವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳಾಗಿದ್ದಾರೆ. ವನಜಾ ಪೂಜಾರ್ತಿಯವರೊಂದಿಗೆ ಆಗಾಗ್ಗೆ ಇವರಿಬ್ಬರು ಮದ್ಯಪಾನ ಮಾಡುತ್ತಿದ್ದರು. ಮಾರ್ಚ್ 9 ರಂದು ಸಂಜೆ 5 ಗಂಟೆಯಿಂದ ಮಾರ್ಚ್ 10 ರಂದು ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದ ಹಿನ್ನೆಲೆಯಲ್ಲಿ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಅವರು ವನಜಾ ಪೂಜಾರ್ತಿಯನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೆಎಂಸಿ ಮಣಿಪಾಲದ ಫೊರೆನ್ಸಿಕ್ ವೈದ್ಯರು, ಸೀನ್ ಆಫ್ ಕ್ರೈಂ ಆಫೀಸರ್(ಸೊಕೊ) ತಂಡ, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.