ಉಡುಪಿ: ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ನಂಬಿಸಿ ಬ್ಯಾಂಕ್ನಲ್ಲಿ ಅಡವಿಟ್ಟು ವಂಚಿಸಿದ್ದ ಆರೋಪದ ಮೇಲೆ ಶಿರ್ವ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಉಡುಪಿ ಅಂಬಲ್ಪಾಯಡಿ ಕಪ್ಪೆಟ್ಟು ನಿವಾಸಿ ಪುನೀತ್ ಆನಂದ್ ಕೋಟ್ಯಾನ್, ಲಕ್ಷ್ಮೀನಗರ ತೆಂಕನಿಡಿಯೂರಿನ ಸುದೀಪ್, ಕಟಪಾಡಿ ಏಣಗುಡ್ಡೆಯ ರಂಜನ್ ಕುಮಾರ್, ಪೆರ್ಡೂರು ಅಲಂಗಾರು ಮೂಲದ ಸರ್ವಜೀತ್ ಎಚ್. ಮತ್ತು ಮಹಾರಾಷ್ಟ್ರ ಪುಣೆ ಮೂಲದ ರಾಜೇಶ್ ದಿಲೀಪ್ ಪಾಟೀಲ್ ಬಂಧಿತರು.
ಆರೋಪಿಗಳಿಂದ 4.3 ಲಕ್ಷ ರೂ. ನಗದು, ನಕಲಿ ಹಾಲ್ಮಾರ್ಕ್ ಸ್ಟಾಂಪ್ಗಳನ್ನು ತಯಾರಿಸಲು ಬಳಸುವ ಲೇಸರ್ ಯಂತ್ರ ಮತ್ತು ಕಂಪ್ಯೂಟರ್ ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಕಲಿ ಚಿನ್ನಾಭರಣಗಳನ್ನು ಬಳಸಿಕೊಂಡು ಸಾಲ ವಂಚನೆ ಪ್ರಕರಣಗಳು ವರದಿಯಾಗಿದ್ದು ಪೊಲೀಸರು ಸಾರ್ವಜನಿಕ ದೂರುಗಳ ಮೇರೆಗೆ ಕ್ರಮ ಕೈಗೊಂಡು ತನಿಖೆಯನ್ನು ಕೈಗೊಂಡಿದ್ದರು. ಕಾಪು ವೃತ್ತ ನಿರೀಕ್ಷಕರ ಮೇಲ್ವಿಚಾರಣೆಯಲ್ಲಿ, ಮೂರು ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು, ಗೋವಾ, ಮುಂಬೈ ಮತ್ತು ದೆಹಲಿಯಿಂದ ಆರೋಪಿಗಳನ್ನು ಪತ್ತೆಮಾಡಿ ಬಂಧಿಸಲಾಯಿತು.
ವಿಚಾರಣೆ ವೇಳೆ ಆರೋಪಿಗಳು ಬ್ರಹ್ಮಾವರ, ಹಿರಿಯಡ್ಕ ಮತ್ತು ಉಡುಪಿ ಪಟ್ಟಣದಲ್ಲಿ ಹಲವಾರು ಬ್ಯಾಂಕ್ಗಳಿಂದ ಸಾಲ ಪಡೆಯಲು ನಕಲಿ ಚಿನ್ನಾಭರಣಗಳನ್ನು ಅಡಮಾನ ಇರಿಸಿ ಇದೇ ರೀತಿಯ ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ಬ್ಯಾಂಕ್ನ ಕಟ್ಟೆಂಗೇರಿ ಶಾಖೆಯ ವ್ಯವಸ್ಥಾಪಕರ ದೂರುಗಳ ಆಧಾರದ ಮೇಲೆ ಶಿರ್ವ ಪೊಲೀಸ್ ಠಾಣೆಯಲ್ಲಿ ಈಗಾಗಲೇ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರ್ಷ ಪ್ರಿಯವಂದ ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯಿತು. ಶಿರ್ವದ ಪಿಎಸ್ಐ ಮಂಜುನಾಥ್ ಮರಬತ್ ಮತ್ತು ಪಿಎಸ್ಐ ಲೋಹಿತ್ ಕುಮಾರ್ ಸಿ.ಎಸ್, ಪಡುಬಿದ್ರಿಯ ಪಿಎಸ್ಐ ಅನಿಲ್ ಕುಮಾರ್ ಟಿ. ನಾಯಕ್, ಎಎಸ್ಐ ಶ್ರೀಧರ್ ಕೆಜೆ, ಪೊಲೀಸ್ ಸಿಬ್ಬಂದಿಗಳಾದ ಕಿಶೋರ್, ಮಂಜುನಾಥ್, ಅರುಣ್, ಸಿದ್ದರಾಯ, ನಾಗರಾಜ್ ಮತ್ತು ಪಡುಬಿದ್ರಿ ಠಾಣೆಯ ಸಿಎಚ್ಸಿ ನಾಗರಾಜ್ ಮೊದಲಾದವರು ಕಾರ್ಯಾಚರಣೆಯಲ್ಲಿದ್ದರು.

Comments are closed.