ಕರ್ನಾಟಕ

ರೈತ ನಕ್ಕರೆ ನಾಡು ಬೆಳಗುವುದು, ರೈತ ನೊಂದರೆ ಸಮಾಜ ನಲುಗುವುದು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ | ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ನೀಡಿದ ವಿಜಯೇಂದ್ರ

Pinterest LinkedIn Tumblr

ಬೆಳಗಾವಿ: ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಭಾಗಗಳ ಕಬ್ಬು ಬೆಳೆಗಾರ ರೈತರು ಬೆವರ ಪರಿಶ್ರಮಕ್ಕೆ ತಕ್ಕ ಬೆಲೆಗಾಗಿ ನ್ಯಾಯದ ಸೆರಗೊಡ್ಡಿ ನಿಂತಿದ್ದಾರೆ, ಅವರೊಂದಿಗೆ ದನಿ ಗೂಡಿಸುವುದು ನನ್ನ ಪಾಲಿನ ಶ್ರೇಷ್ಠ ಕರ್ತವ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಕಬ್ಬಿನ ಬೆಳೆಗೆ ಯೋಗ್ಯ ಬೆಲೆ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಒಂದೆರಡು ತಾಸು ಇರಲು ಬಂದಿದ್ದೆ. ಆದರೆ ಇಲ್ಲಿ ರೈತರು ಉರಿ ಬಿಸಿಲಿನಲ್ಲಿ ಕುಳಿತಿದ್ದನ್ನು ಕಂಡು ಇಲ್ಲೇ ಇರಲು ತೀರ್ಮಾನ ಮಾಡಿದೆ. ಇಂದು ರಾತ್ರಿ ರೈತರ ಜೊತೆಗೆ ಪ್ರತಿಭಟನಾ ಸ್ಥಳದಲ್ಲೇ ಮಲಗುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ಇಂದು ಕಬ್ಬು ಬೆಳೆಗಾರರ ಹೋರಾಟಗಾರರಿಗೆ ಬೆಂಬಲ ನೀಡಿ ವಿಜಯೇಂದ್ರ ಮಾತನಾಡಿದರು.

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿ ಸಿಹಿಯ ಬೆಲೆ ದೊರಕುವವರೆಗೂ ನಿದ್ರೆಗೆ ಜಾರುವ ಮಾತೇ ಇಲ್ಲ. ಅಂದು ರೈತರಿಗಾಗಿ ಪಡಿಮಿಡಿದವರು ಬಿ.ಎಸ್ ಯಡಿಯೂರಪ್ಪ ಅವರು, ಇಂದು ಆ ನಿಟ್ಟಿನಲ್ಲಿ ರೈತ ಸಮುದಾಯದೊಂದಿಗೆ ಹೆಗಲು ಕೊಡುವುದು ನನ್ನ ಪರಮ ಕರ್ತವ್ಯ. ಭೂಮಿ ನಂಬಿ ಬದುಕುವ ರೈತ ಈ ದೇಶದ ಅನ್ನದಾತ, ರೈತರಿದ್ದರೆ ನಾಡು, ರೈತರಿಗಾಗಿ ನಾವು ಎಂದವರು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕರಾದ ದುರ್ಯೋಧನ ಐಹೊಳೆ,  ಸಿದ್ದು ಸವದಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ .ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್, ಮುಖಂಡರಾದ ಮಹಾಂತೇಶ್ ವಕ್ಕುಂದ್, ಸೇರಿದಂತೆ ರೈತ ಹೋರಾಟಗಾರರು, ವಿವಿಧ ರೈತಪರ ಸಂಘಟನೆಗಳ ಪ್ರಮುಖರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.