ಕರಾವಳಿ

ಕುಂದಾಪುರ: ಸರಕಾರಿ ಕಚೇರಿ, ನ್ಯಾಯಾಲಯವಿರುವ ಜನನಿಬಿಡ ಪ್ರದೇಶದಲ್ಲೇ ಬೀದಿನಾಯಿಗಳ ಹಾವಳಿ!

Pinterest LinkedIn Tumblr

ಕುಂದಾಪುರ: ನ್ಯಾಯಾಲಯ, ಕುಂದಾಪುರ ತಾಲೂಕು ಕಚೇರಿ, ಪೊಲೀಸ್ ಠಾಣೆಗಳು ಸಹಿತ ವಿವಿಧ ಸರಕಾರಿಗಳಿದ್ದು ನಿತ್ಯ ಸಾವಿರಾರು ಜನರು ಆಗಮಿಸುವ ಸ್ಥಳದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಿದೆ.

ಇಲ್ಲಿನ ನೂತನ ಬಸ್ ನಿಲ್ದಾಣದ ಅನತಿ ದೂರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕುಂದಾಪುರ ತಾಲೂಕು ಆಡಳಿತ ಸೌಧ, ಪೊಲೀಸ್ ನಗರ ಠಾಣೆ, ಸಂಚಾರ ಠಾಣೆ, ಸರ್ವೇ ಕಚೇರಿ ಸಹಿತ ವಿವಿಧ ಇಲಾಖೆಗಳ ಕಚೇರಿಗಳು, ಹಳೆ ಐಬಿ, ದೇವಾಲಯಗಳಿದೆ. ನಿತ್ಯ ಕೋರ್ಟು-ಕಚೇರಿ ಕೆಲಸದ ನಿಮಿತ್ತ ಸಾವಿರಾರು ಮಂದಿ ಆಗಮಿಸುವ ಪ್ರಮುಖ ಕೇಂದ್ರ ಸ್ಥಾನ ಇದಾಗಿದ್ದು, ಇಲ್ಲಿಗೆ ಸನಿಹದಲ್ಲಿರುವ ಪಂಚಗಂಗಾವಳಿ ನದಿ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಾರೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಬೀದಿ ನಾಯಿ ಹಾವಳಿ ಜಾಸ್ಥಿಯಾಗಿದೆ. 10-15 ನಾಯಿಗಳು ಗುಂಪುಗುಂಪಾಗಿ ಓಡಾಡುವುದು, ದಾರಿಹೋಕರಿಗೆ ಉಪದ್ರವ ನೀಡುವುದು, ವಾಹನಗಳಿಗೆ ಅಡ್ಡಲಾಗಿ ಬಂದು ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಬೀದಿನಾಯಿಗಳ ಸಮಸ್ಯೆ ಪುರಸಭೆಯ ಹಲವು ಸಾಮಾನ್ಯ ಸಭೆಗಳಲ್ಲಿಯೂ ಪ್ರಸ್ತಾಪವಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಬಗ್ಗೆ ಸಂಬಂದಪಟ್ಟವರು ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ಕ್ರಮವಹಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿದೆ: ಬೀದಿನಾಯಿಗಳ ಸಮಸ್ಯೆ ಕುರಿತು ದೂರುಗಳು ಬಂದಿದೆ. ಕಳೆದ ವರ್ಷ 402 ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿ, ಲಸಿಕೆ ಹಾಕಿಸಲಾಗಿದೆ. ಈ ವರ್ಷವೂ 400-500 ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲು ಬಜೆಟ್‌ನಲ್ಲಿಟ್ಟಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ. ‘ಎಬಿಸಿ’ ಕಾರ್ಯಕ್ರಮದಡಿ ಸಂತಾನಹರಣ ಚಿಕಿತ್ಸೆ ನೀಡಬೇಕಿರುವ ಕಾರಣ ಪ್ರಕ್ರಿಯೆ ವಿಳಂಭವಾಗುತ್ತಿದೆ. ಜನರಿಗೆ ಸಮಸ್ಯೆಯಾಗದಂತೆ ನಿಯಮಾನುಸಾರ ಕ್ರಮವಹಿಸುತ್ತೇವೆ.- ರಾಘವೇಂದ್ರ ನಾಯ್ಕ್ (ಹಿರಿಯ ಆರೋಗ್ಯ ನಿರೀಕ್ಷಕರು, ಕುಂದಾಪುರ ಪುರಸಭೆ)

Comments are closed.