ಕರಾವಳಿ

ಗಂಗೊಳ್ಳಿ ಮೀನುಗಾರಿಕೆ ಬಂದರಿನ ‘ಆಧುನೀಕರಣ ಕಾಮಗಾರಿ’ಯ ಶಂಕುಸ್ಥಾಪನೆ ನೆರವೇರಿಸಿದ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ

Pinterest LinkedIn Tumblr

ಕುಂದಾಪುರ: ಯಾವುದೇ ಸರಕಾರಗಳು ಅಭಿವೃದ್ದಿ, ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಜನರ ತೇರಿಗೆ ಹಣದಲ್ಲಿ ಮಾಡುತ್ತದೆ. ಗಂಗೊಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ 60-40% ಅನುದಾನದಲ್ಲಿ ಜಂಟಿಯಾಗಿ ಸುಮಾರು 22.18 ಕೋಟಿ ರೂ. ಮೀಸಲಿಟ್ಟಿದ್ದು ಶೀಘ್ರ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು, ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದರು.

ಮೀನುಗಾರಿಕೆ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಗಂಗೊಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.

ಮೀನುಗಾರಿಕೆ ವಿಚಾರದಲ್ಲಿ ಗಂಗೊಳ್ಳಿ ಬಂದರು ಇತಿಹಾಸ ಹೊಂದಿದೆ. ಆದರೆ ಇಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಇದ್ದುದರಿಂದ ಮತ್ತು ಕಾಮಗಾರಿಯಲ್ಲಿ ವ್ಯತ್ಯಾಸ ಆಗಿದ್ದರಿಂದ ಸಮಸ್ಯೆ ಉದ್ಭವಿಸಿದೆ. ಬಂದರಿನ ಜೆಟ್ಟಿ ಪುನರ್ ನಿರ್ಮಾಣಕ್ಕಾಗಿ 6.5 ಕೋಟಿ ರೂ. ಮೀಸಲಿಡಲಾಗಿದ್ದರೂ ಕೂಡ ಜೆಟ್ಟಿ ಕುಸಿತ ಪ್ರಕರಣ ಲೋಕಾಯುಕ್ತದಲ್ಲಿರುವುದರಿಂದ, ಲೋಕಾಯುಕ್ತ ವರದಿ ಬರುವ ತನಕ ಯಾವುದೇ ಅಭಿವೃದ್ಧಿ ಮಾಡುವಂತಿಲ್ಲ. ಎಷ್ಟು ಬೇಗ ಲೋಕಾಯುಕ್ತ ತನಿಖೆ ನಡೆಸಿ ವರದಿ ನೀಡುತ್ತದೆಯೋ ಅಷ್ಟು ಬೇಗ ಕೆಲಸ ಪ್ರಾರಂಭಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತದೆ ಎಂದರು.

ರಾಜ್ಯದಲ್ಲಿ 340 ಕಿ.ಮೀ ಉದ್ದದ ಕರಾವಳಿ ಪ್ರದೇಶದಲ್ಲಿ 13 ಬಂದರುಗಳಿದೆ.‌ ಮೀನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 2-3 ಬಂದರುಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇಲ್ಲಿನ ಬಂದರು ಪೂರಕ ಅಭಿವೃದ್ದಿಗೆ ಹಾಲಿ ಶಾಸಕರು, ಮಾಜಿ ಶಾಸಕ ಗೋಪಾಲ ಪೂಜಾರಿಯವರು ಪಣತೊಟ್ಟಿದ್ದಾರೆ. 5 ಸಾವಿರ ಕೋಟಿ ಕೊಟ್ಟರೆ ಎಲ್ಲಾ ಬಂದರು ಅಭಿವೃದ್ಧಿ ಮಾಡಬಹುದು. ಬಂದರುಗಳ ಅಭಿವೃದ್ಧಿಗೆ ತೊಡಕಾಗಿದ್ದ ಸಿಆರ್‍‌ಝಡ್ ಸಮಸ್ಯೆ ಬಗೆಹರಿಸಲು ಒಂದುವರೆ ವರ್ಷ ತಗುಲಿದ್ದು, ಇದೇ ಸಮಸ್ಯೆಯಿಂದಾಗಿ ಮರವಂತೆ ಹೊರಬಂದರು ಕಾಮಗಾರಿಯ ಸುಮಾರು 68 ಕೋಟಿ ರೂ. ಹಾಗೆ ಬಾಕಿ ಉಳಿದಿತ್ತು.

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಗಂಗೊಳ್ಳಿ ಬಂದರು ಬಹಳ ಹಿಂದುಳಿದಿದೆ. ಜೆಟ್ಟಿ ಸಮಸ್ಯೆ, ಡ್ರೆಜ್ಜಿಂಗ್ ಸಮಸ್ಯೆಗಳಿದೆ. ಸಾಗರಾ ಮಾಲಾ ಮತ್ತು ಮತ್ಸ್ಯಸಂಪದ ಯೋಜನೆಯಡಿ ಬಂದರುಗಳನ್ನು ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ. ಈ ಭಾಗದಲ್ಲಿ ದೂರದೃಷ್ಟಿಯ ಯೋಜನೆಗಳಿಗೆ ತುಂಬಾ ಅವಕಾಶಗಳಿವೆ. ಕೇಂದ್ರದ ಯೋಜನೆಗಳನ್ನು ತರಲು ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಇರುವ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸುವ ದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ್ ಕಳ್ಳೇರ್, ಮೀನುಗಾರಿಕೆ ಅಪರ ನಿರ್ದೇಶಕ ಸಿದ್ಧಯ್ಯ ಡಿ., ಜಂಟಿ ನಿರ್ದೇಶಕ ವಿವೇಕ ಆರ್., ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನ ಕುಮಾರ್ ಶೇಟ್, ಉಪನಿರ್ದೇಶಕ ಸಂಜೀವ ಅರಕೇರಿ, ಸಹಾಯಕ ನಿರ್ದೇಶಕ ಆಶಾಲತಾ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಶೋಭಾ, ಸಹಾಯಕ ನಿದೇಶಕಿ ಸುಮಲತಾ, ಗುತ್ತಿಗೆದಾರ ಪ್ರಶಾಂತ್ ಮೊಳಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಸುಂದರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮೀನುಗಾರಿಕೆ ಇಲಾಖೆಯ ಗೋಪಾಲಕೃಷ್ಣ ವಂದಿಸಿದರು.

ಬಂದರಿನ ಆಧುನೀಕರಣ: ಗಂಗೊಳ್ಳಿ ಮೀನುಗಾರಿಕಾ ಬಂದರನ್ನು ಆಧುನೀಕರಣಗೊಳಿಸುವ ಸಲುವಾಗಿ ಈ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ. 2 ಹರಾಜು ಮಳಿಗೆಗಳು, ಸಾರ್ವಜನಿಕ ಶೌಚಾಲಯ ಬ್ಲಾಕ್, 2 ಮಹಿಳಾ ವಿಶ್ರಾಂತಿ ಶೆಡ್, ಇಟಿಪಿ ಮತ್ತು ಒಳಚರಂಡಿ, ಕಾಂಕ್ರೀಟ್ ಸರ್ಫೇಸಿಂಗ್‌, 800 ಮೀ. ಉದ್ದದ ಕಾಂಪೌಂಡ್ ವಾಲ್,  1,25,000 ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್, 60,000 ಲೀಟರ್ ಸಾಮರ್ಥ್ಯದ ಸಂಪ್ ಟ್ಯಾಂಕ್, ಪ್ರವೇಶ ದ್ವಾರದೊಂದಿಗೆ ಭದ್ರತಾ ಗಾರ್ಡ್ ಹೌಸ್, ಆರ.ಓ. ಪ್ಲಾಂಟ್‌ನೊಂದಿಗೆ ಫಿಶ್ ಹ್ಯಾಂಡ್ಲಿಂಗ್ ವ್ಯವಸ್ಥೆ, ಅತ್ಯುತ್ತಮ ಸಾಮರ್ಥ್ಯದ ಕನ್ವೇಯರ್‌ ವ್ಯವಸ್ಥೆ, ಲ್ಯಾಂಡ್ ಸ್ಕೇಪಿಂಗ್, ಗಾರ್ಡನಿಂಗ್ ಇರಲಿದೆ.

Comments are closed.