ಉಡುಪಿ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಕಾರೊಂದು ಪೊಲೀಸರು ಹಾಗೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಇದರಲ್ಲಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹೆಜಮಾಡಿ ಟೋಲ್ ಸಮೀಪ ಆ.5ರಂದು ಬೆಳಗಿನ ಜಾವ ನಡೆದಿದೆ.

ಸುರತ್ಕಲ್ ನ ಮೊಹಮ್ಮದ್ ಶಾರೋಜ್ ಬಂಧಿತ ಆರೋಪಿ. ಉಳಿದಂತೆ ಪರಾರಿಯಾವರನ್ನು ಅಜೀಮ್ ಕಾಪು, ಸಫ್ಘಾನ್ ಕಾಪು, ರಾಜಿಕ್ ಬಜೈ ಎಂದು ಪೊಲೀಸರು ತಿಳಿಸಿದ್ದಾರೆ.
ಇವರು ಐದಾರು ದನಗಳನ್ನು ಕಳವು ಮಾಡಿಕೊಂಡು ಕಾರಿನಲ್ಲಿ ಸಾಗಿಸುತ್ತಿದ್ದು ಈ ಕುರಿತ ಮಾಹಿತಿಯಂತೆ ಗಂಗೊಳ್ಳಿ ಪೊಲೀಸರು ವಾಹನವನ್ನು ಹೆಜಮಾಡಿ ಟೋಲ್ ಬಳಿ ತಡೆದು ನಿಲ್ಲಿಸಲು ಮುಂದಾದರು. ಆಗ ಕಾರನ್ನು ಆರೋಪಿಗಳು ಪೊಲೀಸರ ಮೇಲೆ ಹಾಯಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದರೆಂದು ದೂರಲಾಗಿದೆ. ಇದರಿಂದ ಗಂಗೊಳ್ಳಿ ಎಸ್ಐ ಬಸವರಾಜ ಕಣಶೆಟ್ಟಿ ಹಾಗೂ ಸಿಬ್ಬಂದಿ ಸಂದೀಪ್ ಎಂಬವರು ಗಾಯಗೊಂಡಿದ್ದಾರೆ.
ಈ ವೇಳೆ ಕಾರಿನ ಚಾಲಕ ಶರೋಜ್ ನನ್ನು ಪೊಲೀಸರು ಹಿಡಿದರು. ಉಳಿದವರು ಕಾರಿನೊಂದಿಗೆ ಪರಾರಿಯಾಗಿದ್ದು ಕಾರನ್ನು ಉಳ್ಳಾಲದಲ್ಲಿ ದನ ಸಹಿತ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರು ಕಾರು ಮತ್ತು ಕಾರಿನಲ್ಲಿದ್ದ ದನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.