ಉಡುಪಿ: ಜಾಬ್ ಆ್ಯಪ್‌ವೊಂದರಲ್ಲಿ ಬಂದಿದ್ದ ವರ್ಕ್ ಫ್ರಂ ಹೋಂ ಜಾಹೀರಾತು ನಂಬಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ಎರಡು ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ.

ಬೆಂಗಳೂರು ಯಶವಂತಪುರ ಮೂಲದ ಶ್ರೀಧರ್ ವಿ. (27) ಬಂಧಿತ ಆರೋಪಿ. ಹೆಬ್ರಿ ನಾಲ್ಕೂರು ಗ್ರಾಮದ ನಿವಾಸಿ ಮೋಸ ಹೋದವರು.
ಇವರು ಡಿಸೆಂಬರ್ 2024 ರಲ್ಲಿ ಲೋಕಲ್ ಜಾಬ್ ಅಪ್ಲಿಕೇಶನ್‌ನಲ್ಲಿ ಸನ್‌ಶೈನ್ ಹೆಚ್.ಆರ್ ಸೊಲ್ಯುಷನ್ ಎಂಬ ಹೆಸರಿನ ಕಂಪೆನಿಯಿಂದ ನೀಡಿದ ಜಾಹಿರಾತಿನಂತೆ ಡಾಟಾ ಎಂಟ್ರಿ ಬಗ್ಗೆ ವರ್ಕ್ ಫ್ರಂ ಹೋಮ್ ಗೆ ಅರ್ಜಿ ಸಲ್ಲಿಸಿದ್ದರು. ಕಂಪನಿಯ ಹೆಸರಿನಲ್ಲಿ ವಿವಿಧ ಸಂಖ್ಯೆಗಳಿಂದ ಮತ್ತು ವಾಟ್ಸಪ್ ಮುಖಾಂತರ ಅಪರಿಚಿತರು ಗೂಗಲ್ ಪೇ, ಫೋನ್ ಪೇ ಮೂಲಕ ಸೆಕ್ಯುರಿಟಿ ಡೆಪೋಸಿಟ್, ಅಕೌಂಟ್ ಕ್ರಿಯೇಷನ್, ಎರರ್ ಮೋಡಿಫೈ ಎಂಬಿತ್ಯಾದಿ ಸಮಸ್ಯೆಯಾಗಿರುವುದಾಗಿ ನಂಬಿಸಿ ದೂರುದಾರರ ಖಾತೆಯಿಂದ ಒಟ್ಟು 2,02,046 ರೂ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ವಂಚಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯ ಪತ್ತೆಯ ಬಗ್ಗೆ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ಹೆಬ್ರಿ ಪೊಲೀಸ್ ಠಾಣಾ ಪಿ.ಎಸ್.ಐ ರವಿ ಬಿ.ಕೆ, ಸಿಬ್ಬಂದಿಗಳಾದ ಸುಜೀತ್ ಕುಮಾರ್, ಅಜೆಕಾರು ಠಾಣಾ ಸಿಬ್ಬಂದಿ ಸತೀಶ್ ಬೆಳ್ಳೆ, ಸಹಾಯಕ ಪೊಲೀಸ್ ಅಧೀಕ್ಷಕರ ಕಛೇರಿಯ ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ಪ್ರಶಾಂತ್, ವಿಶ್ವನಾಥ, ನಾಗರಾಜ ಮತ್ತು ಶಶಿಕುಮಾರ್ ಒಳಗೊಂಡ ತನಿಖಾ ತಂಡವು ಬೆಂಗಳೂರಿಗೆ ತೆರಳಿ ಆರೋಪಿ ಶ್ರೀಧರ್‌ನನ್ನು ವಶಕ್ಕೆ ಪಡೆದು, ಆತ ಕೃತ್ಯಕ್ಕೆ ಬಳಸಿದ್ದ ಸುಮಾರು 10,000 ರೂ. ಮೌಲ್ಯದ ಮೊಬೈಲ್ ಫೋನ್, 3 ವಿವಿಧ ಬ್ಯಾಂಕಿನ ಎ.ಟಿ.ಎಮ್ ಕಾರ್ಡ್ ಗಳು, ನಗದು ರೂ 1,74,960 ಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಬ್ಯಾಂಕ್ ಖಾತೆಯಲ್ಲಿದ್ದ 27,086ರೂ. ಮೊತ್ತವನ್ನು ಫ್ರೀಜ್ ಮಾಡಲಾಗಿದೆ. ವಿಚಾರಣಾ ಪ್ರಕ್ರಿಯೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
Comments are closed.