ಕುಂದಾಪುರ: ರೈತರಿಗೆ ಸಹಕಾರ ನೀಡಿ, ಅವರ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿ ಸಂಘಗಳು ಹುಟ್ಟಿಕೊಂಡಿದ್ದು ಇಂದು ಹೆಮ್ಮರವಾಗಿ ಬೆಳೆದು ಗ್ರಾಮೀಣ ಭಾಗದವರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸಿ, ಸರಕಾರದ ಸೇವೆಗಳು ಅವರಿಗೆ ತಲುಪಿಸುವ ನಿಟ್ಟಿನಲ್ಲಿ ಯೋಗ್ಯ ಆಡಳಿತ ಮಂಡಳಿ ಇರಬೇಕಿದ್ದು ಬೆಳ್ವೆ ಸಂಘ ಉತ್ತಮ ಸೇವೆ ಗ್ರಾಹಕರಿಗೆ, ರೈತರಿಗೆ ನೀಡಿ ಹೆಸರುವಾಸಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಬುಧವಾರದಂದು ಹಾಲಾಡಿಯಲ್ಲಿ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ, ಬೆಳ್ವೆ ಇದರ ಹಾಲಾಡಿ ಶಾಖೆಯ ಹವಾನಿಯಂತ್ರಿತ ನವೀಕೃತ ಕಟ್ಟಡ ‘ರೈತಮಿತ್ರ’ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, 1976ರಲ್ಲಿ ಹಾಲಾಡಿಯಲ್ಲಿದ್ದ ಶಾಖೆಯು ಬೆಳ್ವೆ ಶಾಖೆಯೊಂದಿಗೆ ಒಗ್ಗೂಡಿ ಆರಂಭವಾಗಿದ್ದು ಇದರಿಂದ ಸಂಸ್ಥೆಗೆ ಆನೆಬಲ ಬಂದಂತಾಗಿತ್ತು. ಪ್ರತಿ ಮಹಾಸಭೆಯಲ್ಲಿ ಹಾಲಾಡಿ ಶಾಖೆ ನಿರ್ಮಾಣದ ಬೇಡಿಕೆ ಕೇಳಿಬಂದ ಹಿನ್ನೆಲೆ ಸ್ವಂತ ಜಾಗದಲ್ಲಿ 80-90 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಹವಾನಿಯಂತ್ರಿತ ವ್ಯವಸ್ಥೆಯ ಕಟ್ಟಡ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಅಭಿವೃದ್ದಿಯ ಧ್ಯೋತಕವಾಗಿ ಶಾಖೆಯ ಉನ್ನತೀಕರಣ ಮಾಡಿದ್ದು ಹಳೆಯ ಆಡಳಿತ ಮಂಡಳಿಯ ಸರ್ವ ಸಹಕಾರವೂ ಇತ್ತು ಎಂದರು.
ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಎಮ್. ಮಹೇಶ್ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಹಾಲಾಡಿ ಗ್ರಾ.ಪಂ. ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಚೋರಾಡಿ, ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಹರೀಶ್ ಕಿಣಿ ಬಿ., ನಿರ್ದೇಶಕರಾದ ಎಚ್.ಕೆ. ಸೀತಾರಾಮ ಶೆಟ್ಟಿ, ಎಂ. ಚಂದ್ರಶೇಖರ್ ಶೆಟ್ಟಿ, ದಯಾನಂದ ಪೂಜಾರಿ, ಇಚ್ಚಿತಾರ್ಥ ಶೆಟ್ಟಿ, ಉದಯ್ ಶೆಟ್ಟಿ, ಕೃಷ್ಣ ನಾಯ್ಕ್, ಸವಿತಾ ಪಿ. ಶೆಟ್ಟಿ, ಸುಜಾತಾ ಪೂಜಾರಿ, ಶಿವರಾಮ, ಪ್ರದೀಪ್, ವಲಯ ಮೇಲ್ವಿಚಾರಕ ಚಂದ್ರಶೇಖರ್ ಶೆಟ್ಟಿ, ಶಾಖಾವ್ಯವಸ್ಥಾಪಕ ಚಂದ್ರಶೇಖರ್ ಪೂಜಾರಿ ಇದ್ದರು.
ಈ ಸಂದರ್ಭ ಸಂಘದ ಇಬ್ಬರು ಹಿರಿಯ ಸದಸ್ಯರಾದ ಸಯ್ಯದ್ ಸಾಹೇಬ್, ಸುಬ್ರಾಯ ಅವರನ್ನು ಗೌರವಿಸಲಾಯಿತು. ನೂತನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಬಾಲಚಂದ್ರ ಶೆಟ್ಟಿ ಹಾಲಾಡಿ, ಕಟ್ಟಡದ ಒಳವಿನ್ಯಾಸ ನಿರ್ವಹಿಸಿದ ಸತೀಶ್ ನಾಯಕ್ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಕೀರ್ತಿಕುಮಾರ್ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಸುಬ್ರಮಣ್ಯ ಪಡುಕೋಣೆ ನಿರೂಪಿಸಿದರು. ಡಾ. ಗಣೇಶ್ ಗಂಗೊಳ್ಳಿ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
Comments are closed.