ಕರಾವಳಿ

ಕೊಲ್ಲೂರಿನ ಗಂಗೆ ಕೊರಗರ ಮನೆ ಧ್ವಂಸ ಪ್ರಕರಣ | ಆರೋಪಿಗಳ ಶೀಘ್ರ ಬಂಧನಕ್ಕೆ ದಲಿತ ಮುಖಂಡರ ಆಗ್ರಹ

Pinterest LinkedIn Tumblr

ಕುಂದಾಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಧಾರ್ಮಿಕ ಶೃದ್ದಾಕೇಂದಕ್ಕೆ ಹೆಸರಾದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಿಂದ ಅನತಿ ದೂರದಲ್ಲಿ ವಾಸವಿದ್ದ ಬುಡಕಟ್ಟು ಕೊರಗ ಕುಟುಂಬಕ್ಕೆ ಸೇರಿದ ಗಂಗೆ ಎಂಬ ಮಹಿಳೆಗೆ ಮಾನವೀಯತೆ ಇಲ್ಲದ ಪಟ್ಟಭದ್ರ ಹಿತಾಸಕ್ತಿಗಳ ಅತಿರೇಕದ ವರ್ತನೆಯಿಂದ ರಕ್ಷಣೆ ಇಲ್ಲದಂತಾಗಿದೆ. ಪ್ರಸ್ತುತ ಪ್ರಾಥಮಿಕ ವರ್ತಮಾನ ವರದಿ (ಎಫ್ಐಆರ್) ದಾಖಲಾಗಿದ್ದು ಆರೋಪಿತರನ್ನು ಬಂಧಿಸಬೇಕು ಎಂದು ಜಿಲ್ಲೆಯ ದಲಿತ ಮುಖಂಡರು ಆಗ್ರಹಿಸಿದ್ದಾರೆ.

ಜಗದಾಂಬ ಟ್ರಸ್ಟ್ ನಡೆಸುವ ಪರಮೇಶ್ವರ ಅಡಿಗ ಎಂಬವರು ಕಳೆದ ಏಪ್ರಿಲ್ 17/2025 ರಂದು ಗಂಗೆ ಕೊರಗ ಕುಟುಂಬ ವಾಸವಿದ್ದ ಮನೆಯನ್ನು ತನ್ನ ಜಗದಾಂಬ ಟ್ರಸ್ಟ್‌ಗೆ ಸೇರಿದ ಜಮೀನು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜೆಸಿಬಿ ಯಂತ್ರದ ಮೂಲಕ ರಾಜರೋಷವಾಗಿ ಮನೆಯನ್ನು ಧ್ವಂಸ ಮಾಡಿದ್ದರು ಇವರ ಕಿಂಚಿತ್ತೂ ಮಾನವೀಯತೆಯ ಇಲ್ಲದ ಈ ವರ್ತನೆಯಿಂದ ತಳ ಸಮುದಾಯಕ್ಕೆ ಸೇರಿದ ಬಡ ಕೊರಗ ಕುಟುಂಬವೊಂದು ಬದುಕು ಕಳೆದುಕೊಂಡು ಬೀದಿಗೆ ಬರುವಂತಾಗಿ ಇಡೀ ಜಿಲ್ಲಾಡಳಿತವೇ ತಲೆತಗ್ಗಿಸುವಂತಾಗಿತ್ತು. ತಪ್ಪಿಸ್ತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆಯೂ ಸಂತ್ರಸ್ತ ಕುಟುಂಬಕ್ಕೆ ಪುನರ್ವಸತಿಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಹಾಗು ಪೋಲಿಸ್ ವರಿಷ್ಠಾಧಿಕಾರಿಗಳನ್ನು ನೇರ ಸಂಪರ್ಕಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಿಯೋಗದಿಂದ ಮನವಿಯನ್ನು ಸಲ್ಲಿಸಲಾಗಿತ್ತು. ತಕ್ಷಣಕ್ಕೆ ಪ್ರಕರಣ ದಾಖಲಿಸುವಲ್ಲಿ ಪೊಲೀಸ್ ಇಲಾಖೆಗೆ ಕೆಲವು ತೊಡಕುಗಳಿದ್ದು ಈದೀಗ ಎರಡು ವಾರಗಳ ನಂತರ ಗಂಗೆ ಕೊರಗ ನೀಡಿದ ದೂರಿನಂತೆ ಜಗದಾಂಬ ಟ್ರಸ್ಟ್ ನ ಪರಮೇಶ್ವರ ಅಡಿಗ ಹಾಗು ಸಂಬಂಧಿಸಿದವರ ಮೇಲೆ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಪೋಲಿಸ್ ಇಲಾಖೆ ಮಾನವೀಯತೆ ಇಲ್ಲದೆ ನಡೆದುಕೊಂಡ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಬಡವರ ಬದುಕಿನ ಮೇಲೆ ಚೆಲ್ಲಾಟವಾಡುವ ಪ್ರಭಾವಿಗಳಿಗೆ ಕಾನೂನು ಭಯ ಉಂಟಾಗಬೇಕಾದರೆ ಇವರ ಬಂಧನವಾಗಲೇಬೇಕು  ಎಂದು ಪೋಲಿಸ್ ಇಲಾಖೆಯನ್ನು ಈ ಮೂಲಕ ಆಗ್ರಹಿಸುತ್ತೇವೆ ಎಂದು ಉಡುಪಿ ಜಿಲ್ಲಾ ದೌರ್ಜನ್ಯ ತಡೆ ಜಾಗೃತಿ ಉಸ್ತುವಾರಿ ಸಮಿತಿ ಸದಸ್ಯ ವಾಸುದೇವ ಮುದೂರು, ದಲಿತ ಮುಖಂಡರು, ಜನಪರ ಹೊರಾಟಗಾರ ಜಯನ್ ಮಲ್ಪೆ, ಪ.ಜಾತಿ/ ಪ.ಪಂಗಡ ಗುತ್ತಿಗೆದಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಪರಮೇಶ್ವರ ಉಪ್ಪೂರು, ಅಂಬೇಡ್ಕರ್ ಯುವ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ಕೆಡಿಪಿ ಸದಸ್ಯ ನರಸಿಂಹ ಹಳಗೇರಿ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ್ ಉಪ್ಪುಂದ, ಬೈಂದೂರು ಸಂಚಾಲಕ ಲಕ್ಷ್ಮಣ  ಕುಂದಾಪುರ ಸಂಚಾಲಕ ನಾಗರಾಜ್ ಸಟ್ವಾಡಿ ಇವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದರು.

Comments are closed.