ಉಡುಪಿ: ಬ್ರಹ್ಮಾವರದಲ್ಲಿ ಮಹಿಳೆಗೆ ಹಲ್ಲೆ ನಡೆಸಿ ಸರ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾರ್ತ್ ಗೋವಾದ ಪೊರ್ವಹಿ್ರಮಂ ನಿವಾಸಿ ಗೌರೀಶ ರೋಹಿದಾಸ್ ಕೆರ್ಕರ್(37) ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಮುಹಿನುದ್ದೀನ್ ಬಾಗಲಕೋಟ್(31), ಮುಂಬೈ ವಿಲೆ ಪಾರ್ಲೆಯ ಸುರ್ಜಿತ್ ಗೌತಮ್ ಕಾರ್(27) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ 10 ಲಕ್ಷ ರೂ. ವೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎ.26ರಂದು ಬೆಳಗ್ಗೆ ಬ್ರಹ್ಮಾವರ ಆದರ್ಶ ನಗರದ ಪದ್ಮಾ(70) ಎಂಬವರು ಮನೆಯ ಕಂಪೌಂಡಿನ ಹೊರಗಡೆ ರಸ್ತೆಯಲ್ಲಿ ಹೂವುಗಳನ್ನು ಕೊಯ್ಯುತ್ತಿರುವಾಗ ಕಾರಿನಲ್ಲಿ ಬಂದ ಆರೋಪಿಗಳು, ಪದ್ಮಾರಿಗೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಮ್ ತೂಕದ 2,50,000 ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿ ಪರಾಗಿಯಾಗಿದ್ದರು. ಇದರಿಂದ ಪದ್ಮ ತೀವ್ರವಾಗಿ ಗಾಯಗೊಂಡಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್., ಬ್ರಹ್ಮಾವರ ಎಸ್ಸೆ ಸುದರ್ಶನ್ ದೊಡ್ಡಮನಿ, ಮಹಾಂತೇಶ ಜಾಬಗೌಡ, ಹಿರಿಯಡ್ಕ ಎಸ್ಸೆ ಪುನೀತ್ ಬಿ.ಇ., ಅಪರಾಧ ಪತ್ತೆ ಸಿಬ್ಬಂದಿಯಾದ ಬ್ರಹ್ಮಾವರ ಠಾಣಾ ಸಿಬ್ಬಂದಿ ಇಮ್ರಾನ್, ಮಹಮ್ಮದ್ ಅಜ್ಜಲ್, ಕಿರಣ್, ಕೋಟ ಠಾಣಾ ಸಿಬ್ಬಂದಿ ರಾಘವೇಂದ್ರ, ವಿಜಯೇಂದ್ರ, ಹಿರಿಯಡ್ಕ ಠಾಣಾ ಸಿಬ್ಬಂದಿ ಕಾರ್ತಿಕ್, ಹೇಮಂತ್, ಬ್ರಹ್ಮಾವರ ವೃತ್ತ ಕಚೇರಿಯ ಎಎಸ್ಸೆ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ತನಿಖೆ ನಡೆಸಿದ ತಂಡ ಆರೋಪಿಗಳನ್ನು ಯಲ್ಲಾಪುರ ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ, ಯಲ್ಲಾಪುರ ಠಾಣಾ ಎಸ್ಸೆ ಯಲ್ಲಾಲಿಂಗ ಕುನ್ನೂರ, ಸಿಬ್ಬಂದಿ ಮುಹಮ್ಮದ್ ಶಫಿ ಎ.ಶೇಖ್, ಗಿರೀಶ ಲಮಾಣಿ, ಶೋಭಾ ಮೊದಲಾದವರ ಸಹಕಾರದೊಂದಿಗೆ ಯಲ್ಲಾಪುರದಲ್ಲಿ ಎ.26ರಂದು ಸಂಜೆ ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.