ಕರಾವಳಿ

ತ್ರಾಸಿ- ಮೊವಾಡಿ ಡೊನ್ ಬೊಸ್ಕೊ ವಿದ್ಯಾ ಸಂಸ್ಥೆಯ ರಜತ ಸಂಭ್ರಮಕ್ಕೆ ನ.30ರಂದು ಚಾಲನೆ

Pinterest LinkedIn Tumblr

ಕುಂದಾಪುರ: ತ್ರಾಸಿ ಹಾಗೂ ಹೊಸಾಡು ಸಮೀಪದ ಮೊವಾಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳ ವಿದ್ಯಾರ್ಜನೆ ನಿಟ್ಟಿನಲ್ಲಿ 2000 ರಲ್ಲಿ ಆರಂಭಗೊಂಡ ಡೊನ್ ಬಾಸ್ಕೋ ಶಿಕ್ಷಣ ಸಂಸ್ಥೆಯು 25 ವರ್ಷಗಳನ್ನು ಪೂರೈಸುತ್ತಿದ್ದು, ನ.30 ರಂದು ರಜತ ಮಹೋತ್ಸವದ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಫಾ| ಮ್ಯಾಕ್ಸಿಂ ಡಿಸೋಜಾ ಹೇಳಿದರು.

ಅವರು ಸೋಮವಾರ ತ್ರಾಸಿಯ ಡೊನ್ ಬಾಸ್ಕೋ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಆರಂಭದಲ್ಲಿ ಈ ಭಾಗದ ಯುವಕರಿಗೆ ವೃತ್ತಿಪರ ತರಬೇತಿಗಳನ್ನು ನೀಡುವ ಉದ್ದೇಶದಿಂದ ಡೀಸೆಲ್ ಮೆಕ್ಯಾನಿಕ್, ಆಟೋ ಎಲೆಕ್ಟ್ರಿಶಿಯನ್, ವೆಲ್ಡಿಂಗ್ ಕೋರ್ಸ್‌ಗಳನ್ನು ಫಾ| ಮೈಕಲ್ ಮಸ್ಕರೇನಸ್ ಆರಂಭಿಸಿದರು. 2002 ರಲ್ಲಿ ನೂತನ ಕಟ್ಟಡ ಉದ್ಘಾಟನೆಗೊಂಡಿತು. 2010-12 ರಲ್ಲಿ ಇನ್ನಿತರ ಕೋರ್ಸ್‌ಗಳು ಆರಂಭಗೊಂಡಿತು. 2011 ರಲ್ಲಿ ಉತ್ತಮ ಗುಣಮಟ್ಟದ ಪಠ್ಯಕ್ರಮದೊಂದಿಗೆ ಶೈಕ್ಷಣಿಕ ಸಂಸ್ಥೆಯಾಗಿ ರೂಪುಗೊಂಡಿತು. 2011 ರಲ್ಲಿ ಫಾ| ಆನಂದ್ ನೊರೊನ್ಹಾ ನೇತೃತ್ವದಲ್ಲಿ ಪ್ರಾಥಮಿಕ ಶಾಲೆ, 12ರಲ್ಲಿ ಮಾಧ್ಯಮಿಕ ಶಾಲೆ, 13 ರಲ್ಲಿ ಪೂರ್ವ ಪ್ರಾಥಮಿಕ ಶಾಲೆ, 2015 ರಲ್ಲಿ ಪ್ರೌಢಶಾಲೆ, ನಂತರ ಸಿಬಿಎಸ್‌ಐ ಪಠ್ಯಕ್ರಮದೊಂದಿಗೆ ಪ.ಪೂ. ಕಾಲೇಜು ಆರಂಭಗೊಂಡಿತು ಎಂದವರು ತಿಳಿಸಿದರು.

ರಜತ ಮಹೋತ್ಸವ ಉದ್ಘಾಟನೆ:
ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಉಪ ವರಿಷ್ಠ ಗೋವಾದ ವಂ| ಫಾ| ಬಾಂಜೆಲಾವ್ ತೆಶಿಯೇರಾ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ವಂ| ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್, ಸಂಸ್ಥೆಯ ಸ್ಥಾಪಕ ವಂ|ಫಾ| ಮೈಕಲ್ ಮಸ್ಕರೇನಸ್, ಕುಂದಾಪುರ ವಲಯದ ಶ್ರೇಷ್ಠ ಧರ್ಮಗುರು ವಂ|ಫಾ| ಪೌಲ್ ರೇಗೋ, ವಲಯದ ಧರ್ಮಗುರುಗಳು, ಧರ್ಮ ಭಗಿನಿಯರು, ಪೋಷಕರು, ದಾನಿಗಳು, ಹಳೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಬಳಿಕ ದ ಡ್ರೀಮರ್ ಎನ್ನುವ 200 ವಿದ್ಯಾರ್ಥಿಗಳನ್ನು ಒಳಗೊಂಡ ಸಂಗೀತ, ನೃತ್ಯ, ನಾಟಕ ಕಾರ್‍ಯಕ್ರಮ ಪ್ರದರ್ಶನಗೊಳ್ಳಲಿದೆ.

ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಫಾ| ರೋಶನ್, ಉಪಪ್ರಾಂಶುಪಾಲ ಫಾ| ಬ್ರೈಸ್ ರೋಡಿಗ್ರಸ್, ಶಿಕ್ಷಕ- ರಕ್ಷಕ ಸಮಿತಿ ಅಧ್ಯಕ್ಷ ಸಂತೋಷ್ ಪಾಯಸ್ ಸುದ್ದಿಗೋಷ್ಠಿಯಲ್ಲಿದ್ದರು.

Comments are closed.