ಕುಂದಾಪುರ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಲುವಾಗಿ ಬಿಟ್ಟಿದ್ದ ಮಾರಣಬಲೆ ತರಲು ಹೋದ ಮೀನುಗಾರ ಅಲೆಗಳಲ್ಲಿ ಕೊಚ್ಚಿ ಹೋಗಿದ್ದು ಕೆ.ಎನ್.ಡಿ. (ಕರಾವಳಿ ನಿಯಂತ್ರಣ ದಳ) ಸಿಬ್ಬಂದಿ ನೀರಿನಿಂದ ರಕ್ಷಿಸಿ ದಡಕ್ಕೆ ತಂದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮದ್ಯೆ ಮೀನುಗಾರ ಮೃತಪಟ್ಟಿದ್ದಾರೆ. ಮಲ್ಪೆ ಕರಾವಳಿ ಕಾವಲು ಪೊಲೀಸ್ ವ್ಯಾಪ್ತಿಯ ಕೋಟ ಸಮೀಪದ ಪಾರಂಪಳ್ಳಿ ಎಂಬಲ್ಲಿ ಈ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ವ್ಯಕ್ತಿ ಪಾರಂಪಳ್ಳಿ ನಿವಾಸಿ ಭಾಸ್ಕರ ಪೂಜಾರಿ (55) ಎಂದು ಗುರುತಿಸಲಾಗಿದೆ.
ಭಾಸ್ಕರ ಪೂಜಾರಿ ಪಾರಂಪಳ್ಳಿಯ ಬಳಿ ಸಮುದ್ರದಲ್ಲಿ ಬಿಟ್ಟಿದ್ದ ಮಾರಣಬಲೆಯನ್ನು ಮೇಲೇತ್ತಲು ಸಮುದ್ರಕ್ಕೆ ಇಳಿದಾಗ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ್ದು
ತಕ್ಷಣ ನಿಯೋಜಿತರಾಗಿದ್ದ ಮಲ್ಪೆ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯ ಕೆ.ಎನ್.ಡಿ. (ಕರಾವಳಿ ನಿಯಂತ್ರಣ ದಳ) ಸಿಬ್ಬಂದಿಗಳಾದ ಸತೀಶ್ ಮತ್ತು ಸುದರ್ಶನ್ ಎಸ್. ಕುಂದರ್ ಇವರು ಸಮುದ್ರಕ್ಕೆ ಹಾರಿ ವ್ಯಕ್ತಿಯನ್ನು ದಡಕ್ಕೆ ತಂದು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಭಾಸ್ಕರ್ ಪೂಜಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
Comments are closed.