ಕರಾವಳಿ

ಉಡುಪಿ ಶ್ರೀಕೃಷ್ಣ ಮಠದಲ್ಲಿ ‘ವಿಟ್ಲಪಿಂಡಿ’ ಆಚರಣೆಗೆ ಸಾಕ್ಷಿಯಾದ ಸಹಸ್ರಾರು ಭಕ್ತರು

Pinterest LinkedIn Tumblr

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಕಲ ಆಚರಣೆಗಳು “ಕೃಷ್ಣ ಲೀಲೋತ್ಸವ” (ವಿಟ್ಲಪಿಂಡಿ) ಸಂಪನ್ನಗೊಂಡಿದ್ದು ಸಹಸ್ರಾರು ಭಕ್ತರು ಈ ಸಂಭ್ರಮವನ್ನು ಕಣ್ತುಂಬಿಕೊಂಡರು.

ವಿಟ್ಲಪಿಂಡಿ ಉತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಸುಂದರವಾಗಿ ರಚಿಸಲಾದ ಶ್ರೀಕೃಷ್ಣ ದೇವರ ಜೇಡಿಮಣ್ಣಿನ ವಿಗ್ರಹವನ್ನು ಚಿನ್ನದ ರಥದಲ್ಲಿ ಹೊರತರಲಾಯಿತು. ಮಧ್ಯಾಹ್ನ 3:15 ಗಂಟೆಗೆ ದೇವಸ್ಥಾನದ ಮುಂಭಾಗದಲ್ಲಿ ಮೆರವಣಿಗೆ ಪ್ರಾರಂಭವಾಯಿತು. ಜೊತೆಗೆ ಚಂಡೆ, ಭಜನೆ ಗಾಯನ, ಹುಲಿ ವೇಷ ಪ್ರದರ್ಶನಗಳು ಮತ್ತು ವಿವಿಧ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.

ಮೊಸರು ಕುಡಿಕೆ ಒಡೆಯುವುದು, ಮೊಸರು, ಹಾಲು, ಬಣ್ಣ ತುಂಬಿದ ಮಡಕೆಗಳು ವಿಶೇಷವಾಗಿ ಭಕ್ತರ ಗಮನ ಸೆಳೆದವು. ಗೊಲ್ಲರ ವೇಷ ಧರಿಸಿದ ತಂಡವೊಂದು ಕಾರ್ ಸ್ಟ್ರೀಟ್ ಸುತ್ತ ಅಳವಡಿಸಿದ್ದ ಕಂಬಗಳಿಗೆ ಕಟ್ಟಿದ್ದ ಮಣ್ಣಿನ ಮಡಕೆಗಳನ್ನು ಒಡೆದವು.

ಪರ್ಯಾಯ ಪುತ್ತಿಗೆ ಮಠಾಧೀಶರು, ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಪೀಠಾಧಿಪತಿ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶ ತೀರ್ಥರು ಸಾನಿಧ್ಯ ವಹಿಸಿದ್ದರು. ಇನ್ನು ಮಠದ ಸುತ್ತಮುತ್ತಲಿನ ವಿವಿಧೆಡೆ ಸಾವಿರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ನಡೆಯಿತು.ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ನಗರವು ವಿವಿಧ ಹುಲಿ ನೃತ್ಯ ತಂಡಗಳು ಮತ್ತು ಇತರ ಟ್ಯಾಬ್ಲೋ ಪ್ರದರ್ಶನಗಳಿಂದ ತುಂಬಿತ್ತು.

Comments are closed.