ಕರಾವಳಿ

ಮಂಗಳೂರು: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯನ್ನು ಕಡಿದು ಬರ್ಬರ ಹತ್ಯೆ

Pinterest LinkedIn Tumblr

ಮಂಗಳೂರು: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಉಳ್ಳಾಲ ಕಡಪ್ಪರ ನಿವಾಸಿ ಶಮೀರ್ (35)ನನ್ನು ತಂಡವೊಂದು ಅಟ್ಟಾಡಿಸಿಕೊಂಡು ತಲವಾರಿನಿಂದ ಕಡಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾ.ಹೆ.66ರ ಕಲ್ಲಾಪು ವಿ.ಕೆ.ಫರ್ನಿಚರ್ ಕಟ್ಟಡದ ಹಿಂಭಾಗದಲ್ಲಿ ಭಾನುವಾರ ಆ.11 ತಡರಾತ್ರಿ ನಡೆದಿದೆ.

ಶಮೀರ್ ಕಾರಿನಲ್ಲಿ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಕಲ್ಲಾಪುವಿನ ರೆಸ್ಟೋರೆಂಟ್ ಒಂದಕ್ಕೆ ಊಟಕ್ಕೆಂದು ಬಂದ ಸಂದರ್ಭ ಹಿಂಬದಿಯಿಂದ ಕಾರಿನಲ್ಲಿ ಹಿಂಬಾಲಿಸಿದ್ದ ತಂಡ ಶಮೀರ್ ಇಳಿಯುತ್ತಿದ್ದಂತೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದೆ. ಅಪಾಯವನ್ನು ಅರಿತ ಶಮೀರ್ ತಕ್ಷಣ ಸ್ಥಳದಿಂದ ಓಡಲು ಯತ್ನಿಸಿದ್ದಾನೆ. ಈ ವೇಳೆ ಅಟ್ಟಾಡಿಸಿದ ಐದು ಮಂದಿಯ ತಂಡ ಕಲ್ಲಾಪು ಜಂಕ್ಷನ್ ನಿಂದ ಸುಮಾರು 500 ಮೀ ದೂರದಲ್ಲಿರುವ ವಿ.ಕೆ.ಫರ್ನಿಚರ್ ಹಿಂಭಾಗದವರೆಗೂ ಅಟ್ಟಾಡಿಸಿ, ಅಲ್ಲಿ ತಲವಾರಿನಿಂದ ಕಡಿದು ಹತ್ಯೆ ನಡೆಸಿದೆ.

ಘಟನೆಯ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಜೊತೆಗೆ ಹುಡುಕಾಡಿದ್ದು ಶಮೀರ್ ಮತ್ತು ಆತನನ್ನು ಅಟ್ಟಾಡಿಸಿಕೊಂಡು ಹೋದ ತಂಡವೂ ಪತ್ತೆಯಾಗಿರಲಿಲ್ಲ. ಇಬ್ವರೂ ತಪ್ಪಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ಹುಡುಕಾಟ ನಡೆಸಿ ತೆರಳಿದ್ದರು. ಈ ಸಂದರ್ಭದಲ್ಲಿ ಕೊಲೆಯಾದ ಶಮೀರ್ ಓಡಿದ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

Comments are closed.