ಕರಾವಳಿ

ಬ್ರಹ್ಮಾವರ: ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಾಸ್ತುತಜ್ಞನ ಬಂಧನ

Pinterest LinkedIn Tumblr

ಉಡುಪಿ: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ವಾಸ್ತುತಜ್ಞನೋರ್ವನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಅನಂತ ನಾಯ್ಕ(51) ಬಂಧಿತ ಆರೋಪಿ. ಈತ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದ ಲಾಡ್ಜ್ ವೊಂದರ ರೂಮಿನಲ್ಲಿ ಕಳೆದ 12ವರ್ಷಗಳಿಂದ ವಾಸ್ತುತಜ್ಞ, ಜಲತಜ್ಞ, ಯೋಗ ಪಂಡಿತ, ಆಧ್ಯಾತ್ಮಿಕ ಪಂಡಿತ ಎಂಬುದಾಗಿ ಬೋರ್ಡ್ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ.

18 ವರ್ಷದ ಯುವಕ ತನ್ನ ತಂದೆಯೊಂದಿಗೆ ಈತನ ಬಳಿ ವಾಸ್ತು ಕೇಳಲು ಲಾಡ್ಜ್‌ನಲ್ಲಿರುವ ರೂಮಿಗೆ ರಾತ್ರಿ 9ಗಂಟೆ ಸುಮಾರಿಗೆ ಹೋಗಿದ್ದನು. ಈ ಸಂದರ್ಭ ತಂದೆಯನ್ನು ಹೊರಗೆ ಕಳುಹಿಸಿದ ಅನಂತ ನಾಯ್ಕ, ಬಳಿಕ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದ ತಂಡ ಆರೋಪಿ ಅನಂತ ನಾಯ್ಕನನ್ನು ಬಂಧಿಸಿದೆ. ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Comments are closed.