ಕರಾವಳಿ

ಕಾಂಗ್ರೆಸ್ ಎಂದಿಗೂ ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಿಲ್ಲ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

Pinterest LinkedIn Tumblr

ಕುಂದಾಪುರ: ಫೆ.17ರಂದು ಮಂಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದ್ದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾ‌ರ್ ಭಾಗವಹಿಸಲಿದ್ದಾರೆ. ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕರಾವಳಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರದ ಯಶಸ್ವಿ ಐದು ಗ್ಯಾರಂಟಿಗಳ ಸ್ತಬ್ದಚಿತ್ರವನ್ನು ಒಳಗೊಂಡ ಬೈಂದೂರು ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರ ರ್ಯಾಲಿ ಮಂಗಳೂರಿಗೆ ಸಾಗಿಹೋಗಲಿದೆ. ಹೆಜಮಾಡಿಯಿಂದ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ರ್ಯಾಲಿ ಕಾರ್ಯಕ್ರಮ ಸ್ಥಳಕ್ಕೆ ಸಾಗಲಿದೆ. ಇದು ಗ್ಯಾರಂಟಿ ಕಾರ್ಯಕ್ರಮ ಅನುಷ್ಟಾನಗೊಂಡ ಬಳಿಕ ನಡೆಯುತ್ತಿರುವ ಮೊತ್ತ ಮೊದಲ ಕಾರ್ಯಕ್ರಮ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.

ಅವರು ಬುಧವಾರ ಕುಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸಂಘಟನೆಯ ಕಾರ್ಯ ಡಿ.ಕೆ ಶಿವಕುಮಾ‌ರ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯಾದ್ಯಂತ ಪಕ್ಷವನ್ನು ಪುನರಚನೆ ಮಾಡಿ, ಹೊಸ ಪದಾಧಿಕಾರಿಗಳ ನೇಮಕ ಮಾಡುವ ಕಾರ್ಯ ಆಗಲಿದೆ ಎಂದರು.

ಕಾಂಗ್ರೆಸ್ ಎಂದಿಗೂ ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡಿಲ್ಲ. ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುವ ಕೆಲಸ ಮಾಡಿಲ್ಲ ಎಂದು ಹೇಳಿದ ಅವರು ಮಾಜಿ ಶಾಸಕ ಸುಕುಮಾರ ಶೆಟ್ಟಿಯವರು ಕಾಂಗ್ರೆಸಿಗೆ ಸೇರ್ಪಡೆಯಾಗಲು ನಮ್ಮ ಆಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ, ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾನ ಸಮಿತಿ ರಚನೆಯ ಬಗ್ಗೆ ಬಿಜೆಪಿ ಅಡ್ಡಿ ಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದೆ. ಆಯಾಯ ಸರ್ಕಾರಗಳು ವ್ಯವಸ್ಥಾಪನ ಸಮಿತಿ ರಚನೆ ಮಾಡುತ್ತವೆ. ಆದರೆ ಬಿಜೆಪಿಗರು ಅಧಿಕಾರ ಧಾಹದಿಂದ ಅದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರಿದರು.

ಕ್ಷೇತ್ರದಲ್ಲಿ ಈ ಹಿಂದೆ ಲಕ್ಷ್ಮೀನಾರಾಯಣ, ಸುಕುಮಾರ ಶೆಟ್ಟರು ಶಾಸಕರಾಗಿದ್ದಾಗಲೂ ಕೂಡಾ ನಾನು ಅಭಿವೃದ್ಧಿಗೆ ಅಡ್ಡಿ ಪಡಿಸಿಲ್ಲ. ಅಭಿವೃದ್ಧಿ ಕೆಲಸಗಳಿಗೆ ನಾನೆಂದೂ ಅಡ್ಡಿ ಪಡಿಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು, ಸಚಿವರನ್ನು ಸಂಪರ್ಕಿಸಿ ಅನುದಾನ ತರುವುದು ಶಾಸಕರ ಜವಬ್ದಾರಿ ಎಂದು ಹೇಳಿದರು.

ಬಿಜೆಪಿಗರು ಸಹ ಗ್ಯಾರಂಟಿಯ ಹಿಂದೆ ಹೋಗಿದ್ದಾರೆ. ಅವರು ಕೂಡಾ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್‌ ಕುಮಾ‌ರ್ ಶೆಟ್ಟಿ ಗುಡಿಬೆಟ್ಟು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಉಪಸ್ಥಿತರಿದ್ದರು.

Comments are closed.