ಉಡುಪಿ: ನಗರದ ಪ್ರಸಿದ್ದ ಬಟ್ಟೆ ಮಳಿಗೆಯೊಂದರಲ್ಲಿ ಶವಿವಾರ ಮಧ್ಯಾಹ್ನ ಮಿಸ್ ಫೈರಿಂಗ್ ಆಗಿ ಸಿಬ್ಬಂದಿಯೋರ್ವರು ಗಾಯಗೊಂಡ ಘಟನೆ ನಡೆದಿದೆ.

(ಸಾಂದರ್ಭಿಕ ಚಿತ್ರ)
ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿತ್ತು. ಅದನ್ನು ಎತ್ತಿಕೊಂಡ ಸಿಬ್ಬಂದಿ ಆಪರೇಟ್ ಮಾಡಿ ಪರೀಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡು ತಗುಲಿದ್ದು, ಅವರನ್ನು ಕೂಡಲೇ ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂದುವರಿದ ತನಿಖೆ: ಪೊಲೀಸರ ಮಾಹಿತಿ
ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ದೌಡಾಯಿಸಿದ್ದು, ಗನ್ ವಶಕ್ಕೆ ಪಡೆದುಕೊಂಡಿದ್ದಾರೆ. ಉಡುಪಿಯ ವಸ್ತ್ರ ಮಳಿಗೆಯ ಮೊದಲನೇ ಮಹಡಿಯ ಪುರುಷರ ಶೌಚಾಲಯವನ್ನು ಅಲ್ಲಿನ ಸಿಬ್ಬಂದಿಗಳು ಸ್ವಚ್ಛಗೊಳಿಸುತ್ತಿರುವಾಗ, ಶೌಚಾಲಯದ ಕಟ್ಟೆಯಲ್ಲಿ ಇದ್ದ ಪಿಸ್ತೂಲನ್ನು ಇನ್ನೊಬ್ಬ ಸಿಬ್ಬಂದಿಯು ಪರೀಕ್ಷಿಸಲು ಪಡೆದುಕೊಂಡು ಕಾಕ್ ಮಾಡಿದ್ದು, ಆಕಸ್ಮಿಕವಾಗಿ ಟ್ರಿಗರ್ ಕೈ ತಾಗಿದಾಗ ಗುಂಡು ಸಿಡಿದು ಇನ್ನೊಬ್ಬ ಸಿಬ್ಬಂದಿಯ ಎಡಕೈ ತೋಳಿಗೆ ರಕ್ತಗಾಯವಾಗಿರುವುದಾಗಿದೆ. ಸದ್ರಿ ಪಿಸ್ತೂಲನ್ನು ಯಾರೋ ಅಪರಿಚಿತ ವ್ಯಕ್ತಿಯು ಶೌಚಾಲಯದಲ್ಲಿ ಬಿಟ್ಟು ಹೋಗಿದ್ದರು. ಸಿಬ್ಬಂಧಿಯವರು ಸೂಕ್ತ ಮುಂಜಾಗ್ರತೆ ವಹಿಸದೇ ಕಾಕ್ ಮಾಡಿದ ಪರಿಣಾಮ ಫೈರ್ ಆಗಿದೆ. ಈ ಬಗ್ಗೆ ಸಿಬ್ಬಂದಿಗಳು ಹಾಗೂ ಪಿಸ್ತೂಲ್ ಬಿಟ್ಟು ಹೋದ ಅಪರಿಚಿತ ವ್ಯಕ್ತಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನಿಖೆಯ ಪ್ರಥಮ ಹಂತದಲ್ಲಿ ಪಿಸ್ತೂಲ್ ಸಂಬಂಧಪಟ್ಟವರ ಬಗ್ಗೆ ಪತ್ತೆ ಹಚ್ಚಲಾಗಿದ್ದು, ಈ ಪಿಸ್ತೂಲ್ ವಾರಿಸುದಾರರು ಪರವಾನಿಗೆ ಹೊಂದಿದ ಪಿಸ್ತೂಲ್ ಆಗಿದ್ದು, ವಸ್ತ್ರ ಮಳಿಗೆಯ ಶೌಚಾಲಯಕ್ಕೆ ತೆರಳಿದಾಗ ಮರೆತು ಬಿಟ್ಟು ಹೋಗಿರುವುದಾಗಿ ತಿಳಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.