ಕರಾವಳಿ

ಜಿ.ಎ.ಬಾವ ಅವರಿಗೆ 2023ನೇ ಸಾಲಿನ ಪ್ರತಿಷ್ಠಿತ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಪ್ರದಾನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಗುಲ್ವಾಡಿ ಟಾಕೀಸ್ ಕನ್ನಡದ ಕಂಪು ಪಸರಿಸುವ ಕೆಲಸ‌ ಮಾಡುತ್ತಿದ್ದು ಸಾಹಿತಿ, ಕಲಾವಿದರನ್ನು ಗುರುತಿಸುವ ಜೊತೆಗೆ ಯುವ ಸಾಹಿತ್ಯ ಆಸಕ್ತರಿಗೆ ತರಬೇತಿ ನೀಡಿದಾಗ ಎಲ್ಲರಿಗೆ ಪ್ರೇರಣೆಯಾಗುತ್ತದೆ ಎಂದು ಕರ್ನಾಟಕ ಹಿಂದುಳಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.

ಅವರು ಭಾನುವಾರ ಸಂಜೆ‌ ಕೋಟೇಶ್ವರದ ಯುವ ಮೆರಿಡಿಯನ್ ಆವರಣದಲ್ಲಿ ನಡೆದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಗುಲ್ವಾಡಿ ಟಾಕೀಸ್ ವತಿಯಿಂದ ನೀಡುವ 2023 ನೇ ಸಾಲಿನ ಪ್ರತಿಷ್ಠಿತ ಕನ್ನಡದ ಮೊದಲ ಸಾಮಾಜಿಕ ಕಾದಂಬರಿಯ ಪಿತಾಮಹ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಹಾಗೂ ಕನ್ನಡದ ಹಿರಿಯ ಪತ್ರಕರ್ತ ಸಂತೋಷ ಕುಮಾರ ಗುಲ್ವಾಡಿ ಪ್ರಶಸ್ತಿ‌ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಪೊಲೀಸ್ ಅಧಿಕಾರಿ, ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಪುರಸ್ಕೃತ ಜಿ.ಎ.ಬಾವ ಅವರಿಗೆ ಈ ಬಾರಿಯ ಪ್ರತಿಷ್ಠಿತ ಕನ್ನಡದ ಮೊದಲ ಸಾಮಾಜಿಕ ಕಾದಂಬರಿಯ ಪಿತಾಮಹ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿ.ಎ ಬಾವ ಅವರು, ಗುಲ್ವಾಡಿ ಟಾಕೀಸ್ ಮೂಲಕ ಸಾಹಿತ್ಯದ ಬಗೆಗಿನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಜ್ಯಾತ್ಯಾತೀತತೆ ಬಗ್ಗೆ ಸಾರುವ ಊರು ಕುಂದಾಪುರ. ಇಲ್ಲಿ 45 ವರ್ಷದ ಹಿಂದೆ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದು ಇಲ್ಲಿನವರು ಕುಟುಂಬದವರಂತೆ ನೋಡಿಕೊಂಡಿದ್ದರು ಎಂದು ಹಳೆ ನೆನಪು ಮೆಲಕು ಹಾಕಿದರು‌.

ಸನ್ಮಾನ: ಇದೇ ವೇಳೆ ತಮ್ಮ ಕರ್ತವ್ಯದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಮಂದಿಗೆ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಿಂದ ಉದಯ ಗಾಂವಕಾರ, ಮನೋವೈದ್ಯ ಡಾ.ಪ್ರಕಾಶ್ ತೊಳಾರ್, ನ್ಯಾಯವಾದಿ ರವಿಕಿರಣ ಮುರ್ಡೇಶ್ವರ,
ವೈದ್ಯಕೀಯ ಕ್ಷೇತ್ರದಿಂದ ಡಾ. ಆದರ್ಶ ಹೆಬ್ಬಾರ್, ರಂಗಭೂಮಿಯಿಂದ ವಾಸುದೇವ ಗಂಗೇರ, ಸಮಾಜಸೇವೆಗಾಗಿ ದಸ್ತಗೀರ್ ಸಾಹೇಬ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಉಮೇಶ ಪುತ್ರನ್, ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಪಾಲುದಾರರಾದ ಬೈಲೂರು ಉದಯ ಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದು ಗುಲ್ವಾಡಿ ಗ್ರಾಮಸ್ಥರ ಹಿತರಕ್ಷಣ ವೇದಿಕೆ ಕಾರ್ಯಕ್ರಮಕ್ಕೆ ಸಹಕಾರ ನೀಡಿತ್ತು.

ಕಾರ್ಯಕ್ರಮದ ಸಂಯೋಜಕ ಗುಲ್ವಾಡಿ ಟಾಕೀಸಿನ ರುವಾರಿ ಯಾಕೂಬ್ ಖಾದರ್ ಗುಲ್ವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಳ್ಳಿ‌ ಉಸ್ಮಾನ್ ಸನ್ಮಾನಿತರ ಪಟ್ಟಿ ವಾಚಿಸಿದರು.‌ ಗಣೇಶ್ ಶೆಟ್ಟಿ ನಿರೂಪಿಸಿದರು.

ಬಂದವರಿಗೆ ಆತಿಥ್ಯ..!
ಕೋಟೇಶ್ವರ ಯುವ ಮೆರಿಡಿಯನ್ ಆವರಣದ ತೆರದ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಆಗಮಿಸಿದವರಿಗೆ ಬಾಯಿ ಚಪ್ಪರಿಸಲು ಬಿಸಿ ಬಿಸಿಯಾದ ಮಾಲ್ಟ್, ಮಂಡಕ್ಕಿ ಉಪ್ಕರಿ (ಚರ್ಮುರಿ), ಗುಲ್ವಾಡಿ ಸಣ್ಣಕ್ಕಿಯ ಗೊಕ್ಲುಂಡಿ, ಕರುಂ ಕುರುಂ ಚಕ್ಕುಲಿ, ಕಾರದ ಅಕ್ರೂಟ್, ನೆಲ್ಲಿಕಾಯಿ, ಕಾರದ ಕಡ್ಡಿ ಮತ್ತು ನೆಲಗಡಲೆ ನೀಡಲಾಗಿತ್ತು

Comments are closed.