ಕುಂದಾಪುರ: ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವೃದ್ಧರೊಬ್ಬರು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ ಘಟನೆ ಬಸ್ರೂರಲ್ಲಿ ಬುಧವಾರ ಸಂಭವಿಸಿದೆ.

ಬಸ್ರೂರಿನ ಬಸ್ ನಿಲ್ದಾಣ ಬಳಿಯ ನಿವಾಸಿ ಜಗಜೀವನ್ (76) ಸಾವನ್ನಪ್ಪಿದ ವ್ಯಕ್ತಿ. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಮಂಗಳವಾರ ಸಂಜೆ ಇವರು ಮನೆಯಿಂದ ಬಸ್ರೂರಿನ ಬಸ್ ನಿಲ್ದಾಣ ಬಳಿ ಬರುವಾಗ ಹೆಜ್ಜೇನು ಹಿಂಡು ಕಚ್ಚಿದ್ದು, ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಬುಧವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು.
ಬಸ್ ನಿಲ್ದಾಣ ಬಳಿಯಿದ್ದ ಹೆಜ್ಜೇನು ಹಿಂಡಿಗೆ ಯಾವುದೋ ಹಕ್ಕಿ ಬಡಿದು ಹೆಜ್ಜೇನುಗಳು ಹಾರಾಡಲು ಆರಂಭಿಸಿದ್ದು, ಈ ವೇಳೆ ಮೊದಲಿಗೆ ಒಬ್ಬರಿಗೆ ದಾಳಿ ನಡೆಸಿದೆ. ಆ ಬಳಿಕ ಅದೇ ದಾರಿಯಲ್ಲಿ ಬರುತ್ತಿದ್ದ ಜಗಜೀವನ್ ಅವರ ಮೇಲೆ ಹಿಂಡು ದಾಳಿ ನಡೆಸಿದೆ. ಇವರು ಬಳಿ ಬಟ್ಟೆ ಸಹ ಧರಿಸಿದ್ದರಿಂದ ಇವರನ್ನೇ ಗುರಿಯಾಗಿಸಿದೆ ಎನ್ನಲಾಗಿದೆ. ಏಕಕಾಲದಲ್ಲಿ ನೂರಾರು ಹೆಜ್ಜೇನು ಗಳು ದಾಳಿ ನಡೆಸಿದ್ದರಿಂದ ಮುಖ, ದೇಹ, ಕೈ-ಕಾಲುಗಳೆಲ್ಲ ಊದಿಕೊಂಡು, ಗಂಭೀರ ಗಾಯಗೊಂಡಿದ್ದರು.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
Comments are closed.