ಕರ್ನಾಟಕ

ಪ್ರಧಾನಿ ಮೋದಿ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಚರ್ಚೆ, 18,177 ಕೋಟಿ ಪರಿಹಾರ ಬಿಡುಗಡೆಗೆ ಮನವಿ

Pinterest LinkedIn Tumblr

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿ, ಶೀಘ್ರವೇ 18,177 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಇದರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ.

ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲ್ಲೂಕುಗಳು ಬರಪೀಡಿತವಾಗಿದ್ದು, ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಷ್ಟವಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಎನ್‌.ಡಿ.ಆರ್‌.ಎಫ್. ನಿಂದ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ ಒದಗಿಸುವಂತೆ ಮನವಿ ಮಾಡಿದ್ದಾರೆ.

ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡಲು 2015-16 ರ ಕೃಷಿ ಗಣತಿಯನ್ನು ಪರಿಗಣಿಸಲಾಗುತ್ತಿದ್ದು, ಇದು 8 ವರ್ಷ ಹಳೆಯ ಮಾಹಿತಿಯಾಗಿದೆ. ಅಲ್ಲದೆ, ರಾಜ್ಯದಲ್ಲಿ ರೈತರ ದತ್ತಾಂಶವನ್ನು ಫ್ರೂಟ್ಸ್‌ ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು, ಪಿಎಂ-ಕಿಸಾನ್‌ ಯೋಜನೆಗೆ ಇದನ್ನು ಪರಿಗಣಿಸಲಾಗುತ್ತಿದೆ. ಇದರನ್ವಯ ರಾಜ್ಯದಲ್ಲಿ 83 ಲಕ್ಷ ಜನ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, ಪರಿಹಾರ ವಿತರಣೆಗೆ ಈ ದತ್ತಾಂಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಬರಪೀಡಿತ ತಾಲ್ಲೂಕುಗಳಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿರುವುದಾಗಿ ತಿಳಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ ದಿನಾಂಕ 22-09-2023 ರಂದ ಸಲ್ಲಿಸಲಾಗಿತ್ತು ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್‌ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು.

ಆದ್ದರಿಂದ ಅಕ್ಟೋಬರ್‌ 20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್‌.ಡಿ.ಆರ್.ಎಫ್. ಅಡಿ 17,901 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ12,577 ಕೋಟಿ ರೂ. ಮೊತ್ತವೂ ಸೇರಿದೆ. ನವೆಂಬರ್‌ 4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಬರದಿಂದ ಸಂಕಷ್ಟದಲ್ಲಿರು ಕರ್ನಾಟಕದ ರೈತರ ಹಿತರಕ್ಷಣೆಯ ದೃಷ್ಟಿಯಿಂದ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡುವಂತೆ ಕೋರಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

Comments are closed.