ಕರಾವಳಿ

ಡಿ.9: ಉಡುಪಿ-ದ.ಕ ಜಿಲ್ಲೆಗಳ ವಿದ್ಯಾರ್ಥಿಗಳಿಗಾಗಿ ಕುಂದಾಪುರದಲ್ಲಿ ‘ಕಾರ್ಟೂನು ಸ್ಪರ್ಧೆ’

Pinterest LinkedIn Tumblr

ಕುಂದಾಪುರ: ‘ಕಾರ್ಟೂನು ಹಬ್ಬ ಬಳಗ- ಕುಂದಾಪುರ’ ಇವರ ನೇತೃತ್ವದಲ್ಲಿ 10ನೆಯ ವರ್ಷದ “ಕಾರ್ಟೂನು ಹಬ್ಬ” ಈ ಬಾರಿ ಡಿಸೆಂಬರ್ 9 ರಿಂದ 12ರ ತನಕ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಡಿಸೆಂಬರ್ 9 ರಂದು ಮಧ್ಯಾಹ್ನ 2ಗಂಟೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಕಾರ್ಟೂನು ರಚನಾ ಸ್ಪರ್ಧೆಯು ನಡೆಯಲಿದೆ.

ಕಾರ್ಟೂನು ಸ್ಪರ್ಧೆಯು 4ರಿಂದ 7ನೇಯ ತರಗತಿ, 8ರಿಂದ 10ನೇಯ ತರಗತಿ ಮತ್ತು ಪಿಯುಸಿ ಹಾಗೂ ಮೇಲ್ಪಟ್ಟು ಹೀಗೆ, ಮೂರು ವಿಭಾಗಗಳಲ್ಲಿ ನಡೆಯಲಿದೆ. ಕಾರ್ಟೂನು ಸ್ಪರ್ಧೆಯ ವಿಷಯವನ್ನು ಸ್ಪರ್ಧೆ ನಡೆಯುವ ಸ್ಥಳದಲ್ಲೇ ನೀಡಲಾಗುವುದು.

ಸ್ಪರ್ಧೆಯ ನಿಯಮಗಳು: ಸ್ಥಳದಲ್ಲಿ ಸ್ಪರ್ಧೆಯ ವಿಷಯ ನೀಡಿದಾಗ ವಿದ್ಯಾರ್ಥಿಗಳು ಐಡಿಯಾ ಹೊಳೆಯದೆ ಗೊಂದಲಕ್ಕೊಳಗಾಗುವುದನ್ನು ತಪ್ಪಿಸಲು ವಿಧ್ಯಾರ್ಥಿಗಳು ತಮ್ಮ ತಮ್ಮ ಪೋಷಕರೊಂದಿಗೆ ವಿಷಯವನ್ನು ಚರ್ಚಿಸಲು ಸ್ಪರ್ಧೆಯ ಪೂರ್ವದಲ್ಲಿ 30ನಿಮಿಷಗಳ ಕಾಲಾವಕಾಶ ನೀಡಲಾಗುವುದು ಮತ್ತು ಆ ನಂತರ ಚಿತ್ರ ರಚಿಸಲು 2ಗಂಟೆಗಳ ಕಾಲಾವಕಾಶ ದೊರೆಯಲಿದೆ. ಸ್ಪರ್ಧೆಯ ಸಮಯದಲ್ಲಿ ಚಿತ್ರರಚನೆ ಮತ್ತಿತರ ಕಾರ್ಯಗಳನ್ನು ಕಡ್ಡಾಯವಾಗಿ ವಿಧ್ಯಾರ್ಥಿಗಳೇ ಮಾಡಬೇಕಾಗಿದೆ. ಸ್ವಂತವಾದ ಮತ್ತು ಕ್ರೀಯಾಶೀಲ ಐಡಿಯಾಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಚಿತ್ರ ರಚನೆಗೆ ಡ್ರಾಯಿಂಗ್ ಹಾಳೆಗಳನ್ನು ಕಾರ್ಟೂನು ಹಬ್ಬದ ಆಯೋಜಕರೆ ಪೂರೈಕೆ ಮಾಡಲಿದ್ದು, ಚಿತ್ರ ಬಿಡಿಸಲು ಬೇಕಾಗುವ ಇತರ ಪರಿಕರಗಳನ್ನು ವಿಧ್ಯಾರ್ಥಿಗಳೇ ತರಬೇಕಾಗಿದೆ.

ಚಿತ್ರದ ಶೈಲಿ: ಕಪ್ಪುಬಿಳುಪಿನಲ್ಲಿ ಅಥವಾ ಇತರ ಬಣ್ಣಗಳನ್ನು ಬಳಸಿ ಅಥವಾ ಡೈಲಾಗ್ ರಹಿತವಾಗಿಯೂ ಚಿತ್ರಗಳನ್ನು ರಚಿಸಬಹುದಾಗಿದೆ. ಬಹುಮಾನಗಳ ಘೋಷಣೆ ಮತ್ತು ವಿತರಣೆ ಡಿಸೆಂಬರ್ 10ರಂದು ಸಂಜೆ 5 ಗಂಟೆಗೆ ನಡೆಯಲಿದೆ ಮತ್ತು ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಡಿಸೆಂಬರ್ 11ಮತ್ತು 12ರಂದು ತಾಲೂಕಿನ ವಿವಿಧ ಶಾಲೆ, ಕಾಲೇಜುಗಳ ಮಕ್ಕಳಿಗಾಗಿ ವ್ಯಂಗ್ಯಚಿತ್ರ ತರಭೇತಿ ಕಾರ್ಯಾಗಾರ ನಡೆಯಲಿದೆ. ಕಾರ್ಟೂನು ಹಬ್ಬ ನಡೆಯುವ ನಾಲ್ಕೂ ದಿನಗಳ ಕಾಲ ‘ಕಾರ್ಟೂನು ಪ್ರದರ್ಶನ’ ಮತ್ತು ‘ಸಾರ್ವಜನಿಕರ ವ್ಯಂಗ್ಯಭಾವಚಿತ್ರ ರಚನೆ’ ನಡೆಯಲಿದೆ ಎಂದು ಕಾರ್ಟೂನು ಹಬ್ಬ ಬಳಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Comments are closed.