ಕರಾವಳಿ

ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗುವಂತಾಗಲಿ: ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಡಿವೈಎಸ್ಪಿ ಬೆಳ್ಳಿಯಪ್ಪ

Pinterest LinkedIn Tumblr

ಕುಂದಾಪುರ: ಪತ್ರಕರ್ತರ ಸಂಘದವರು ‘ನಾ ಕಂಡಂತೆ ಪೊಲೀಸ್’ ಎನ್ನುವ ಪ್ರಬಂಧ ಸ್ಪರ್ಧೆಯ ಮೂಲಕ ಪೊಲೀಸರ ಬಗ್ಗೆ ಮಕ್ಕಳಲ್ಲಿ ಸದಾಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಮಕ್ಕಳಲ್ಲಿ ಪೊಲೀಸರ ಬಗ್ಗೆ ಇರುವ ಭಯ ಹೋಗುವಂತಾಗಲಿ, ಅವರಲ್ಲಿ ಪೊಲೀಸರ ಬಗ್ಗೆ ಸದಾಭಿಪ್ರಾಯ ಹೆಚ್ಚಾಗುವಂತಾಗಲಿ. ಪೊಲೀಸರು ಎಂದಿಗೂ ಜನರ, ಸಮಾಜದ ಸೇವೆಗಾಗಿಯೇ ಇದ್ದು, ಸಮಾಜದಲ್ಲಿ ಎಲ್ಲರ ಸಮಸ್ಯೆಯನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿರುವವರು ಎಂದು ಕುಂದಾಪುರ ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ ಹೇಳಿದರು.

ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಎನ್ನುವ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪೊಲೀಸರ ಬಗ್ಗೆ ಇರುವ ಭಾವನೆಯನ್ನು ಮುಕ್ತವಾಗಿ ಬರೆಯಿರಿ. ಋಣಾತ್ಮಕ, ಧನಾತ್ಮಕ ಯಾವುದೇ ವಿಚಾರವೂ ಇರಲಿ. ಇದರಿಂದ ನಮಗೂ ತಿದ್ದಿಕೊಳ್ಳಲು ಅವಕಾಶ ಆಗುತ್ತದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿದ್ಯಾಂಗ ಉಪನಿರ್ದೇಶಕ ಗಣಪತಿ ಮಾತನಾಡಿ, ಪತ್ರಕರ್ತರು ಸುದ್ದಿಯೊಂದಿಗೆ ಜಾಗೃತಿ ಮೂಡಿಸುವ ಈ ಕಾರ್‍ಯಕ್ರಮದ ಮೂಲಕ ಜತೆ- ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಕೆಲಸ ಮಾಡಿದ್ದಾರೆ. ಇಂತಹ ಕಾರ್‍ಯಕ್ರಮ ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸಲು, ಮಾತ್ರವಲ್ಲದೆ ಮಕ್ಕಳು ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಜೀವನ ಸಾಗಿಸಲು ಅನುಕೂಲವಾಗಲಿದೆ. ಸರಕಾರಿ ಶಾಲೆಗಳ ಬಗೆಗಿನ ಪತ್ರಕರ್ತರ ಕಾಳಜಿ ನಿಜಕ್ಕೂ ಶ್ಲಾಫನೀಯ ಎಂದವರು ಹೇಳಿದರು.

ಛಾಯಾಗ್ರಾಹಕರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ. ಮಾತನಾಡಿ, ಚಿಕ್ಕಂದಿನಿಂದಲೇ ಪೊಲೀಸರ ಬಗ್ಗೆ ಭಯ ಹುಟ್ಟಿಸುವ ಕೆಲಸ ಆಗುತ್ತಿದೆ. ಇಂತಹ ಕಾರ್‍ಯಕ್ರಮಗಳಿಂದ ಆದರೂ ಆ ಭಯ ಹೋಗಲಾಡಿಸುವಂತಾಗಲಿ ಎಂದರು.

ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಮಾತನಾಡಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ತಾಲೂಕು ಸಂಘದ ಕೋಶಾಧಿಕಾರಿ ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ರಾಘವೇಂದ್ರ ಪೈ ಸ್ವಾಗತಿಸಿ, ಪ್ರಧಾನ ಕಾರ್‍ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಹಿರಿಯ ಪತ್ರಕರ್ತ ಕೆ.ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿದರು.

Comments are closed.