ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಹೋಟೆಲ್ ಉದ್ಯಮಿಗೆ ವಂಚಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು 3ನೇ ಎಸಿಎಂಎಂ ನ್ಯಾಯಾಲಯಕ್ಕೆ 800 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಈ ನಡುವೆ ವಂಚನೆ ಪ್ರಕರಣದ ಆರೋಪಿ ಅಭಿನವ ಹಾಲಶ್ರಿಗೆ ಜಾಮೀನು ಸಿಕ್ಕಿದೆ.

ಉದ್ಯಮಿ ಗೋವಿಂದಬಾಬು ಪೂಜಾರಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಹಿಂದುತ್ವ ಸಂಘಟನೆಗಳ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದ ಚೈತ್ರಾ , ಹೊಸಪೇಟೆ ಸಮೀಪದ ಹಿರೇಹಡಗಲಿ ಹಾಲಸ್ವಾಮಿ ಮಠದ ಹಾಲವೀರಪ್ಪ ಸ್ವಾಮೀಜಿ, ಗಗನ್ ಕಡೂರ್, ಶ್ರೀಕಾಂತ್ ಸೇರಿದಂತೆ 8 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ಕೈಗೊಳ್ಳಲಾಗಿತ್ತು. ಸಿಸಿಬಿ ಘಟಕದ ಮಹಿಳಾ ಸಂರಕ್ಷಣಾ ದಳದ ಎಸಿಪಿ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. 75 ಸಾಕ್ಷಿದಾರರ ಹೇಳಿಕೆ ದಾಖಲಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ವಂಚನೆಯಾದ ಹಣದಲ್ಲಿ ಶೇ 90ರಷ್ಟು ಜಪ್ತಿ ಮಾಡಿಕೊಳ್ಳಲಾಗಿದೆ. ಉದ್ಯಮಿಗೆ ಹೇಗೆ ಆಮಿಷ ಒಡ್ಡಲಾಗಿತ್ತು. ಯಾವ ಸ್ಥಳದಲ್ಲಿ ಹಣ ಪಡೆಯಲಾಗಿತ್ತು. ಎಲ್ಲೆಲ್ಲಿ ಸಭೆ ನಡೆಸಿದ್ದರು ಎಂಬ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿಜಿಟಲ್ ಸಾಕ್ಷ್ಯ, ಎಂಟು ಮಂದಿ ಆರೋಪಿಗಳ ಬ್ಯಾಂಕ್ ವ್ಯವಹಾರದ ವಿವರ, ಆರೋಪಿಗಳ ನಡುವೆ ನಡೆದ ಮೊಬೈಲ್ ಸಂದೇಶಗಳ ವಿನಿಮಯದ ದಾಖಲೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ವಿವಿಧ ಸ್ಥಳಗಳಲ್ಲಿ ಸಭೆ ನಡೆಸಿದ್ದರು. ಆ ಸ್ಥಳಕ್ಕೂ ಆರೋಪಿಗಳನ್ನೇ ಕರೆದೊಯ್ದು ಮಹಜರು ನಡೆಸಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಸೇರಿಸಲಾಗಿದೆ ಎನ್ನಲಾಗಿದೆ.
ಆರೋಪಿಗಳು ಉದ್ಯಮಿಯಿಂದ ಪಡೆದಿದ್ದ ಹಣದ ಪೈಕಿ 4.11 ಕೋಟಿ ಜಪ್ತಿ ಮಾಡಿಕೊಳ್ಳಲಾಗಿತ್ತು. 25 ಲಕ್ಷ ಕೊಟ್ಟು ಹಾಲವೀರಪ್ಪ ಸ್ವಾಮೀಜಿ ಖರೀದಿಸಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳು ಎಲ್ಲೆಲ್ಲಿ ಹಣ ವಿನಿಯೋಗಿಸಿದ್ದರು ಎಂದು ಮಾಹಿತಿ ಸಹ ಆರೋಪಟ್ಟಿಯಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.
Comments are closed.