(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಬಳಿ ವ್ಯಕ್ತಿಯೊಬ್ಬರ ಹಾಡಿಯಲ್ಲಿ ಆರೋಪಿಗಳು ಕಾಡುಹಂದಿ ಬೇಟೆಗಾಗಿ ಕಚ್ಚಾ ಬಾಂಬ್‌ಗಳನ್ನು ತಯಾರಿಸಿ ಹಾಡಿಯಲ್ಲಿ ಇಟ್ಟ ಪರಿಣಾಮ ಸುಧೀರ್ ಪೂಜಾರಿ ಎನ್ನುವರ ಸಾಕು ನಾಯಿ ಕಚ್ಚಾ ಬಾಂಬ್‌ನ್ನು ಕಚ್ಚಿ ಮೃತಪಟ್ಟ ಘಟನೆ ಅ.12ರಂದು ವರದಿಯಾಗಿದ್ದು ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಕ್ರಮ ಸ್ಫೋಟಕ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಅ.13ರಂದು ಆರೋಪಿಗಳನ್ನು ಬಂಧಿಸಿದ್ದಾರೆ. ದಾವಣಗೆರೆ ಚೆನ್ನಗಿರಿ ಮೂಲದ ಕಾಶಿನಾಥ ಜೆ.ಎಸ್ (30), ಶಿವಮೊಗ್ಗ ಜಿಲ್ಲೆಯ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಯಹೋಶಿವು (25) ಬಂಧಿತರು. ಆರೋಪಿಗಳು ಕಚ್ಚಾ ಬಾಂಬ್ ಸಾಗಾಟಕ್ಕೆ ಬಳಸಿದ 15 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಮತ್ತು 10 ಸಾವಿರ ನಗದು ಸ್ವಾಧೀನಪಡಿಸಿಕೊಂಡಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಉಡುಪಿ ಪೊಲೀಸ್ ಉಪಾಧೀಕ್ಷಕ ದಿನಕರ ಪಿ.ಕೆ ನಿರ್ದೇಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಮ್ ನೇತೃತ್ವದಲ್ಲಿ ಬ್ರಹ್ಮಾವರ ಪಿಎಸ್‌ಐ ರಾಜಶೇಖರ ವಂದಲಿ, ಠಾಣೆ ಸಿಬ್ಬಂದಿಗಳಾದ ಸುರೇಶ್ ಶೆಟ್ಟಿ, ಸಂತೋಷ ಶೆಟ್ಟಿ, ಪ್ರವೀಣ್ ಶೆಟ್ಟಿಗಾರ್, ವೆಂಕಟರಮಣ ದೇವಾಡಿಗ, ಮಹಮ್ಮದ್ ಅಜ್ಮಲ್, ಸಂತೋಷ ರಾಠೋಡ್ ಮತ್ತು ದೀಲಿಪ್‌ರವರನ್ನನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಉಡುಪಿ ಬಿ.ಡಿ.ಡಿ.ಎಸ್ ತಂಡ, ಸೀನ್ ಆಫ್ ಕ್ರೈಮ್ ಅಧಿಕಾರಿ ತಂಡ, ಮತ್ತು ಬ್ರಹ್ಮಾವರ ಪೊಲೀಸರು ಒಟ್ಟು 22 ಸಜೀವ ಕಚ್ಚಾ ಬಾಂಬ್‌ಗಳನ್ನು ಪತ್ತೆ ಮಾಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ನ್ಯಾಯಾಲಯದ ಅನುಮತಿ ಮೇರೆಗೆ ಸಾರ್ವಜನಿಕರ ಸುರಕ್ಷತ ಹಾಗೂ ಭದ್ರತೆಯ ಹಿತದೃಷ್ಠಿಯಿಂದ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದರು.
ಹಂದಿ ಬೇಟೆಯಾಡುವ ಖತರ್ನಾಕ್ ಆರೋಪಿಗಳು..!
ಬಂಧಿತ ಇಬ್ಬರು ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಇನ್ನಿತರ ಕಡೆ ಸ್ಥಳೀಯವಾಗಿ ಸಿಗುವ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಬಳಸಿ ಕಚ್ಚಾ ಬಾಂಬ್‌ಗಳನ್ನು ತಯಾರಿಸಿ ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಭಾಗಗಳಲ್ಲಿ ಕಾಡು ಹಂದಿಗಳ ಬೇಟೆಗೆ(ಶಿಕಾರಿಗೆ) ಬಳಕೆ ಮಾಡಿ ಕಾಡು ಹಂದಿಯ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಂದು ತಿಳಿದುಬಂದಿದ್ದು ಈ ಹಿಂದೆ ಬ್ರಹ್ಮಾವರ ಮತ್ತು ಕೋಟ ಭಾಗದಲ್ಲಿ ಕಚ್ಚಾ ಬಾಂಬ್ ಬಳಸಿ ಕಾಡುಹಂದಿ ಶಿಕಾರಿ ಮಾಡಿರುವ ಸಂಶಯವಿರುವ ಕಾರಣ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
Comments are closed.