ಕರ್ನಾಟಕ

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲಿನ ಗೂಂಡಾ ಪ್ರಕರಣ ರದ್ದು; ಜೈಲಿನಿಂದ ಬಿಡುಗಡೆ

Pinterest LinkedIn Tumblr

ಬೆಂಗಳೂರು: ಹಿಂದೂ ಕಾರ್ಯಕರ್ತ, ಗೋರಕ್ಷಕ ಮತ್ತು ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್‌ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲಾಗಿದ್ದು ಪುನೀತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಮಾಜದ ಸಾಮರಸ್ಯ ಕದಡಿದ ಆರೋಪ, ಸಮಾಜ ವಿರೋಧಿ ಕೃತ್ಯಗಳೂ ಸೇರಿದಂತೆ ಕಳೆದ 10 ವರ್ಷಗಳಲ್ಲಿ ಪುನೀತ್‌ ವಿರುದ್ಧ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 10 ಪ್ರಕರಣ ದಾಖಲಾಗಿದ್ದವು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಪುನೀತ್‌ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಅಂತೆಯೇ ನಗರ ಪೊಲೀಸ್‌ ಆಯುಕ್ತರ ಆದೇಶದಂತೆ ಆ.12ರಂದು ಪುನೀತ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಸಿಸಿಬಿ ಪೊಲೀಸರ ಕ್ರಮ ಪ್ರಶ್ನಿಸಿ ಪುನೀತ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯವು ರಾಜ್ಯ ಸರ್ಕಾರ, ನಗರ ಪೊಲೀಸ್‌ ಆಯುಕ್ತರು ಹಾಗೂ ಸಿಸಿಬಿ ಅಧಿಕಾರಿಗಳಿಗೆ ಆ.24ರಂದು ನೋಟಿಸ್‌ ಜಾರಿ ಮಾಡಿತ್ತು. ಹೈಕೋರ್ಟ್‌ನ ಸೂಚನೆಯಂತೆ ಸರಕಾರ, ಪುನೀತ್‌ ಪ್ರಕರಣದ ವಿಚಾರಣೆಗೆ ಸಲಹಾ ಸಮಿತಿ ರಚಿಸಿತ್ತು. ಈ ಸಮಿತಿಯು ಪುನೀತ್‌ನನ್ನು ಗೂಂಡಾ ಕಾಯಿದೆಯಡಿ ಬಂಧನದಲ್ಲಿಡಲು ಸಾಕಷ್ಟು ಕಾರಣಗಳು ಇಲ್ಲ ಎಂದು ವರದಿ ನೀಡಿತ್ತು.

ಈ ವರದಿ ಆಧರಿಸಿ ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ) ಅಧೀನ ಕಾರ್ಯದರ್ಶಿ ಎನ್‌.ಆರ್‌.ಬಾಣದರಂಗಯ್ಯ ಅವರು, ಪುನೀತ್‌ ಕೆರೆಹಳ್ಳಿ ವಿರುದ್ಧದ ಬಂಧನ ಆದೇಶ ಹಿಂಪಡೆಯಬೇಕು. ಈ ಪ್ರಕರಣಕ್ಕೆ ಅನ್ವಯವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಪುನೀತ್‌ ಕೆರೆಹಳ್ಳಿಯನ್ನು ಬಂಧಮುಕ್ತಗೊಳಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತರಿಗೆ ಶನಿವಾರ ಆದೇಶಿಸಿದ್ದರು. ಈ ಆದೇಶದ ಬೆನ್ನಲ್ಲೇ ಪುನೀತ್‌ ಕೆರೆಹಳ್ಳಿಯನ್ನು ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ
ಏಪ್ರಿಲ್ ತಿಂಗಳಿನಲ್ಲಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರಿನ ಬಳಿ ಗೋ ಸಾಗಣೆ ವೇಳೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಗ್ರಾಮದ ಬಳಿ ಮಂಡ್ಯದ ಗುತ್ತಲು ನಿವಾಸಿ ಇದ್ರೀಷ್ ಪಾಷ(35) ಮೃತಪಟ್ಟವರು. ಅದಕ್ಕೂ ಹಿಂದಿನ ದಿನ ಅಂದರೆ ಮಾರ್ಚ್ 31ರಂದು ಪುನೀತ್ ಕೆರೆಹಳ್ಳಿ ಮತ್ತವರ ತಂಡ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ಹಿಡಿದು ಜಾನುವಾರು ರಕ್ಷಣೆ ಮಾಡಿದ್ದರು. ಈ ಸಂಬಂಧ ಮೃತನ ಸಹೋದರ ಸಾತನೂರು ‌ಠಾಣೆಗೆ ಪುನೀತ್ ಕೆರೆಹಳ್ಳಿ ಮತ್ತು ಅವರ ತಂಡದ ವಿರುದ್ಧ ದೂರು ನೀಡಿದ್ದು ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು.

Comments are closed.