ಕರಾವಳಿ

ಕರಾವಳಿಯಿಂದ ರಾಜಧಾನಿಗೆ ಮತ್ತೊಂದು ನಿತ್ಯ ರೈಲು; ಉಡುಪಿ, ಬೆಂಗಳೂರು, ಮೈಸೂರು ಪ್ರಯಾಣಿಕರು ಫುಲ್ ಖುಷ್..!

Pinterest LinkedIn Tumblr

ಕುಂದಾಪುರ: ಬೆಂಗಳೂರು ಮೈಸೂರು ಮಂಗಳೂರಿಗೆ ಬರುತಿದ್ದ ಗಾಡಿ‌ ಸಂಖ್ಯೆ 16585 ಎಕ್ಸ್ಪ್ರೆಸ್ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದ್ದು ಕುಂದಾಪುರ, ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜಧಾನಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರಿಗೆ ನಿತ್ಯ ರೈಲು ಪ್ರಯಾಣಕ್ಕೆ ಅವಕಾಶ ಸಿಕ್ಕಿದೆ.

(ಸಾಂದರ್ಭಿಕ ಚಿತ್ರ)

ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದ ಕುಂದಾಪುರ ರೈಲ್ವೇ ಸಮಿತಿ ಹಾಗೂ ದೆಹಲಿ ಮಟ್ಟದಲ್ಲಿ ನಿರಂತರ ಕೆಲಸ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ.

ಈಗಿರುವ ಕರಾವಳಿಯ ಜೀವನಾಡಿ ಪಂಚಗಂಗಾ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಬೇಗ ಹೊರಡುತ್ತದೆ, ಟಿಕೇಟು ಸಿಗುವುದಿಲ್ಲ ಎಂಬ ದೂರುಗಳಿಗೆ ಈಗ ಪರಿಹಾರ ಸಿಕ್ಕಂತಾಗಿದೆ. ಬೈಯಪ್ಪನ ಹಳ್ಳಿಯಿಂದ ಹೊರಟು ರಾತ್ರಿ ಒಂಬತ್ತು ಘಂಟೆಗೆ ಮೆಜೆಸ್ಟಿಕ್ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು, ಉಡುಪಿ ಕುಂದಾಪುರ ಮೂಲಕ ಸಂಚರಿಸಲಿದೆ. ಅಲ್ಲದೆ ಮಧ್ಯಾಹ್ನ ಮೂರುವರೆ ಸುಮಾರಿಗೆ ಕರಾವಳಿಯಿಂದ ಹೊರಡುವ ರೈಲು ಬೆಳಿಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ ಎನ್ನಲಾಗಿದೆ.

ವಾರಕ್ಕೆ ಮೂರು ದಿನ ಮಂಗಳೂರಿನವರೆಗೆ ಮಾತ್ರ ಓಡುತಿದ್ದ ಈ ರೈಲನ್ನು 6 ದಿನ ಓಡುವಂತೆ ಮಾಡಿ ಕುಂದಾಪುರ ಕಾರವಾರಕ್ಕೆ ವಿಸ್ತರಿಸಲು ಸಂಸದ ಪ್ರತಾಪ್ ಸಿಂಹ ಪ್ರಯತ್ನಿಸಿದ್ದು, ಅವರ ಬೇಡಿಕೆಯಂತೆ ವಾರಕ್ಕೆ ಮೂರು ದಿನದ ಬದಲು ಆರು ದಿನ ಓಡುವಂತೆ ಭಾರತೀಯ ರೈಲ್ವೇ ಕಳೆದ ವರ್ಷವೇ ಆದೇಶ ಮಾಡಿತ್ತು .
ಆದರೆ ರೈಲಿನ ಉಡುಪಿ, ಕುಂದಾಪುರ, ಕಾರವಾರ ವಿಸ್ತರಣೆ ಮಾತ್ರ ವಿಳಂಬವಾಗುತ್ತಿದ್ದರಿಂದ ಕುಂದಾಪುರ ರೈಲ್ವೇ ಸಮಿತಿ ನಿರಂತರವಾಗಿ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೇ ಹಾಗು ನೈರುತ್ಯ ರೈಲ್ವೇ ಜತೆ ಬೆಂಗಳೂರಿಗೆ ಹೆಚ್ಚುವರಿ ರೈಲು ಸೇವೆಯ ಹೋರಾಟ ನಡೆಸಿತ್ತು.

ಈ ಬಗ್ಗೆ ರೈಲ್ವೇ ಸಚಿವಾಲಯವನ್ನು ಮೈಸೂರು‌ ಸಂಸದ ಪ್ರತಾಪ್ ಸಿಂಹ ನಿರಙತರವಾಗಿ ಭೇಟಿಯಾಗುತ್ತಿದ್ದು ಕಳೆದ ಜನವರಿಯಲ್ಲಿ ರೈಲು ಮಂಡಳಿಯನ್ನು ಭೇಟಿಯಾಗಿದ್ದ ಕುಂದಾಪುರ ರೈಲ್ವೇ ಸಮಿತಿಯ ಗಣೇಶ್ ಪುತ್ರನ್, ಗೌತಮ್ ಶೆಟ್ಟಿ ಹಾಗು ಉತ್ತರ ಕನ್ನಡ ರೈಲ್ವೇ ಸಮಿತಿಯ ರಾಜೀವ್ ಗಾಂವಕರ್ ಅವರು ಬೆಂಗಳೂರಿಗೆ ವಾರದ ಆರು ದಿನದ ಬದಲು ಏಳು ದಿನವೂ‌ ಓಡುವ ಹೆಚ್ಚುವರಿ ರೈಲಿನ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆದು ರೈಲ್ವೇ ಸಚಿವರಿಗೆ ಅದನ್ನು ಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಈ ಪ್ರಸ್ತಾಪದ ಮೇಲೆ ಸಂಸದ ಪ್ರತಾಪ್ ಸಿಂಹ ಎಲ್ಲಾ ಸಮಸ್ಯೆಗಳನ್ನೂ ಮೀರಿ ರೈಲ್ವೇ ಸಚಿವರ ಒಪ್ಪಿಗೆ ಪಡೆದುದಲ್ಲದೇ ರೈಲ್ವೇ ಅದಿಕಾರಿಗಳ ಸಭೆ ಕರೆದು ದಸರಾ ಒಳಗೆ ರೈಲು ಓಡಲೇ ಬೇಕೆಂದು ಕಟ್ಟು ನಿಟ್ಟಿನ ಸೂಚನೆ ರವಾನಿಸಿದ ಪರಿಣಾಮ ಇಲಾಖೆ ಈ ರೈಲಿನ ವಿಸ್ತರಣೆಗೆ ಆದೇಶ ನೀಡಿದೆ.

ಮೂರು ವರ್ಷಗಳ ಹಿಂದೆ ಓಡುತಿದ್ದ ಮೈಸೂರು ಮಾರ್ಗದ ಬೆಂಗಳೂರು ರೈಲು ಕೊಂಕಣ ರೈಲ್ವೆಯ‌ ಒತ್ತಡದಿಂದ ರದ್ದಾದ ಕಾರಣದಿಂದ ಉಂಟಾಗಿದ್ದ ಮೈಸೂರು ಸಂಪರ್ಕದ ಕೊರತೆ ಕೂಡಾ ಇದೀಗ ಮರು ಸ್ಥಾಪನೆಯಾಗಿದೆ.ಈ ಬಗ್ಗೆ ಕಳೆದ ವರ್ಷ ಕೊಂಕಣ ರೈಲ್ವೆ ಕಾರ್ಯಾಚರಣೆ ನಿರ್ದೇಶಕ ಸಂತೋಷ್ ಕುಮಾರ್ ಝಾ ಜತೆ ಕುಂದಾಪುರ ರೈಲ್ವೇ ಸಮಿತಿ ಸಭೆ ನಡೆಸಿ ಅವರಿಗೆ ಸಮಸ್ಯೆಯ ಅರಿವು ಮೂಡಿಸಿತ್ತು.

ಮೈಸೂರು ‌ಮಾರ್ಗದ ರೈಲಿನ ವಿಸ್ತರಣೆ ಸಮಸ್ಯೆಗಳಿದ್ದರೆ ಈ ಶನಿವಾರ ಓಡುತ್ತಿರುವ ಯಶವಂತಪುರ ಮುರುಡೇಶ್ವರ ವಿಶೇಷ ರೈಲನ್ನೇ ಏಳೂ ದಿನ ಓಡಿಸುವಂತೆ ಕುಂದಾಪುರ ರೈಲ್ವೇ ಸಮಿತಿ ಸಂಸದೆ ಶೋಭಾ ಕರಂದ್ಲಾಜೆಯವರ ಮೂಲಕ ಇಲಾಖೆಗೆ ಸಂದೇಶ ನೀಡಿತ್ತು . ರೈಲು ವಿಸ್ತರಣೆಯಿಂದ ಪಂಚಗಂಗಾ ರೈಲಿನ ಮೇಲಿದ್ದ ಬಾರೀ ಒತ್ತಡ ನಿವಾರಣೆಯಾಗಲಿದೆ.

ಕರಾವಳಿ ಮತ್ತು ಮೈಸೂರು ಸಂಪರ್ಕದ ಕುರಿತು ಬೆಂಬಲಿಸಿದ್ದ ಕರಾವಳಿಯ ಸಂಸದರು, ಸಂಸದ ಪ್ರತಾಪ್ ಸಿಂಹರನ್ನು ಉಡುಪಿಯಲ್ಲಿ ಕುಂದಾಪುರ ರೈಲ್ವೇ ಸಮಿತಿ ಜತೆ ಬೇಟಿಯಾಗಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯರಾದ ಪ್ರತಾಪ್ ಶೆಟ್ಟಿ ಚೇರ್ಕಾಡಿ ಹಾಗು ಜಿಲ್ಲಾ ಬಿಜೆಪಿಯ ನಾಗರಾಜ್ ಆಚಾರ್ ರವರಿಗೂ ಹಾಗು ಮೈಸೂರು ಗ್ರಾಹಕ ಪರಿಷತ್ ನಾಯಕ ಯೋಗೇಂದ್ರ ಸ್ವಾಮಿಯವರಿಗೂ ಕುಂದಾಪುರ ರೈಲ್ವೇ ಸಮಿತಿ‌ ಕೃತಜ್ಞತೆ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಕುಂದಾಪುರ ರೈಲ್ವೇ ಸಮಿತಿಯ ನಿರಂತರ ಪ್ರಯತ್ನ ಹಾಗು ಮೈಸೂರು ಸಂಸದರ ನಿರಂತರ ಪ್ರಯತ್ನದಿಂದ ಕರಾವಳಿ ಕರ್ನಾಟಕಕ್ಕೆ ಹೊಸ ರೈಲು ಸೇವೆ ಲಭಿಸಿದ್ದು ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಬಹಳ ಅನುಕೂಲವಾಗಿದೆ.
– ಗಣೇಶ್ ಪುತ್ರನ್ (ಕುಂದಾಪುರ ರೈಲ್ವೇ ಸಮಿತಿ)

ಮೈಸೂರನ್ನು ಕರಾವಳಿಯ ಜತೆ ಬೆಸೆಯಲು ಸಂಪರ್ಕ ಕ್ರಾಂತಿಯ ಸಂಸದ ಎಂದೇ ಖ್ಯಾತಿಯಾದ ಪ್ರತಾಪ್ ಸಿಂಹರ ಶ್ರಮ ಹಾಗೂ ಭಾರತೀಯ ರೈಲ್ವೇಯ ಹಿರಿಯ ಅಧಿಕಾರಿಗಳ ಸಹಕಾರದಿಂದ ಕರಾವಳಿಗೆ ಈ ಸೇವೆ ಲಭ್ಯವಾಗಿದೆ. ಬೆಂಗಳೂರಿನಿಂದ‌ ಕೊಂಚ ವಿಳಂಭವಾಗಿ ಹೊರಡುವವರಿಗೆ ಹಾಗೂ ಬೆಂಗಳೂರು ಬೇಗನೆ ತಲುಪಬೇಕೆನ್ನುವರಿಗೆ ಈ ವಿಸ್ತರಣೆಯಿಂದ ಅನುಕೂಲವಾಗಲಿದೆ.
– ಗೌತಮ್ ಶೆಟ್ಟಿ, ಕುಂದಾಪುರ ರೈಲ್ವೇ ಸಮಿತಿ‌

Comments are closed.