ಕರ್ನಾಟಕ

ತಂದೆಯ ಅಂತ್ಯಕ್ರಿಯೆಗೂ ಬಾರದ ಮಕ್ಕಳು: ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅಂತ್ಯ ಸಂಸ್ಕಾರ ಮಾಡಿದ ಚಿಕ್ಕೋಡಿ ಪೊಲೀಸರು

Pinterest LinkedIn Tumblr

ಬೆಳಗಾವಿ: ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳ್ಳಿಯಲ್ಲಿ ಪುಣೆ ಮೂಲದ ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಮೂಲಚಂದ್‌ ಶರ್ಮಾ (72) ಎನ್ನುವರು ಉತ್ತಮ ಸಂಬಳ, ಮಕ್ಕಳು ವಿದೇಶದಲ್ಲಿ ಉತ್ತಮ ನೌಕರಿಯಲ್ಲಿದ್ದು ತಮ್ಮ ಕೊನೆಯ ದಿನಗಳಲ್ಲಿ ಅನಾಥರಾಗಿ ಕಳೆದಿದ್ದು ಮೃತಪಟ್ಟಿದ್ದಾರೆ.

ನಾಗರಮುನ್ನೊಳ್ಳಿ ಎಂಬ ಪುಟ್ಟ ಊರಿನಲ್ಲಿಅವರ ಅಂತ್ಯ ಸಂಸ್ಕಾರದ ವೇಳೆ ವಿದೇಶದಲ್ಲಿದ್ದ ಮಕ್ಕಳು ಸೇರಿದಂತೆ ಸಂಬಂಧಿಕರೂ ಬಂದಿಲ್ಲ. ಆ ವೇಳೆ ಪೊಲೀಸರು ಅಮೆರಿಕದಲ್ಲಿರುವ ಮಗ ಮತ್ತು ಮಗಳನ್ನು ಸಂಪರ್ಕಿಸಿದ್ದಾರೆ. ನೀವು ಬೇಕಿದ್ದರೆ ಶವ ಸಂಸ್ಕಾರ ಮಾಡಿ, ಇಲ್ಲದಿದ್ದರೆ ಶವ ಬಿಸಾಡಿ ಎಂದು ನಿಷ್ಠುರವಾಗಿ ನುಡಿದಿದ್ದಾರೆ. ಪೊಲೀಸರು ಮಾನವೀಯತೆ ಮೆರೆದು ಆ ವಕ್ತಿಯ ಅಂತ್ಯ ಸಂಸ್ಕಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಚಂದ್‌ ಶರ್ಮಾ ಅವರನ್ನು ಒಂದೂವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೊಳಿ ಗ್ರಾಮದ ಶಿವನೇರಿ ಲಾಡ್ಜ್‌ಗೆ ವ್ಯಕ್ತಿಯೊಬ್ಬ ಕರೆದುಕೊಂಡು ಬಂದಿದ್ದ. ಬಳಿಕ ಆತ ಮೂಲಚಂದ್‌ ಅವರನ್ನು ಲಾಡ್ಜ್‌ನಲ್ಲಿ ಬಿಟ್ಟು ಪರಾರಿಯಾಗಿದ್ದ. ಲಾಡ್ಜ್‌ ಸಿಬ್ಬಂದಿ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮೂಲ ಚಂದ್‌ ವಿಚಾರಣೆ ನಡೆಸಿದ್ದರು. ಅವರು ಇಂಗ್ಲಿಷ್‌, ಹಿಂದಿ, ಮರಾಠಿ ಬಾಷೆ ಮಾತನಾಡುತ್ತಿದ್ದರು.

ಪೊಲೀಸರೇ ಆರೋಗ್ಯ ವಿಚಾರಿಸುತ್ತಿದ್ದರು
ಈ ವಿಷಯ ತಿಳಿದ ಚಿಕ್ಕೋಡಿ ಪಿಎಸ್‌ಐ ಬಸಗೌಡ ನೇರ್ಲಿ ಮೂಲಚಂದ್‌ ಅವರಿಗೆ ಸಮಾಧಾನ ಹೇಳಿದ್ದರು. ಬಳಿಕ ಅವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಆಸ್ಪತ್ರೆಗೆ ಕಳಿಸಿದ್ದರು. ಚಿಕ್ಕೋಡಿ ಠಾಣೆ ಪೊಲೀಸ್‌ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದರು.

ಚಿಕಿತ್ಸೆ ಫಲಿಸದ ಕಾರಣ ಶನಿವಾರ ಆಸ್ಪತ್ರೆಯಲ್ಲಿದ್ದ ಮೂಲಚಂದ್‌ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ನಾಗರಮುನ್ನೊಳಿ ಗ್ರಾಮಕ್ಕೆ ತಂದ ಪೊಲೀಸರು, ನಾಗರಮುನ್ನೊಳಿ ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರು ಸಹಾಯದಿಂದ ಅಂತಿಮ ಸಂಸ್ಕಾರ ನೆರವೇರಿಸಿದರು.

Comments are closed.