ಕರಾವಳಿ

ಉಡುಪಿ ಉದ್ಯಾವರದ ಮನೆ ಕಳ್ಳತನ ಪ್ರಕರಣದ ಆರೋಪಿಯ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಸೊತ್ತು ವಶ

Pinterest LinkedIn Tumblr

ಉಡುಪಿ: ಉದ್ಯಾವರ ಬೊಳ್ಜೆ ನಿವಾಸಿ ಅನಿತಾ ಡಿ’ಸಿಲ್ವ ಅವರ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳನನ್ನು ಕಾಪು ಪೊಲೀಸರು ಬಂಧಿಸಿದ್ದು ಚಿನ್ನಾಭರಣ, ನಗದು, ಸ್ಕೂಟರ್‌ ಸಹಿತ 8 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಟಪಾಡಿ ಏಣಗುಡ್ಡೆ ಗ್ರಾಮದ ಅಚ್ಚಡ ನಿವಾಸಿ ಜೋನ್‌ ಪ್ರಜ್ವಲ್‌ ಫೆರ್ನಾಂಡಿಸ್‌ (32) ಬಂಧಿತ ಆರೋಪಿ. ಈತನಿಂದ ಒಟ್ಟು 16 ಪವನ್‌ 2.150 ಗ್ರಾಂ (130.150 ಗ್ರಾಂ) ತೂಕದ ರೂ. 6,90,713 ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ನಗದು, ಮೋಟಾರು ಸೈಕಲ್‌ ಹಾಗೂ ಇತರೇ ಸೊತ್ತಿನ ಒಟ್ಟು ಮೌಲ್ಯ 8,02,083 ಆಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ಆ. 17ರಂದು ಉದ್ಯಾವರ ಬೊಳ್ಜೆಯ ಅನಿತಾ ಡಿ’ಸಿಲ್ವ ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಮಗ ಶಾಲೆಗೆ ತೆರಳಿದ್ದನು. ಮಗಳು ಮಧ್ಯಾಹ್ನ 1 ಗಂಟೆಗೆ ಉಡುಪಿಗೆ ಕಂಪ್ಯೂಟರ್‌ ಕ್ಲಾಸ್‌ಗೆಂದು ಹೋಗಿದ್ದು ಸಂಜೆ 5ಕ್ಕೆ ಮನೆಗೆ ಮರಳಿದ ವೇಳೆ ಮನೆಗೆ ಕಳ್ಳರು ನುಗ್ಗಿದ್ದ ಘಟನೆ ಬೆಳಕಿಗೆ ಬಂದಿತ್ತು. ಮನೆಯ ಬೆಡ್‌ ರೂಮ್‌ನ ಕಪಾಟಿನ ಲಾಕರ್‌ನ್ನು ಮುರಿದ ಕಳ್ಳರು ಚಿನ್ನಾಭರಣ ಇಟ್ಟಿದ್ದ ಪೆಟ್ಟಿಗೆಯನ್ನು ಕದ್ದೊಯ್ದಿದ್ದರು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಂಬಂಧಿಕನ ಮೇಲೆ ಸಂಶಯ ಆರೋಪಿ ಜೋನ್‌ ಪ್ರಜ್ವಲ್‌ ಫೆರ್ನಾಂಡಿಸ್‌ ಅನಿತಾ ಡಿ’ಸಿಲ್ವ ಅವರ ಸಂಬಂಧಿಕನಾಗಿದ್ದು ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಜೋನ್‌ ಮೇಲೆ ಹೆಚ್ಚಿನ ಸಂಶಯವಿತ್ತು. ಕಾಪು ಕ್ರೈಂ ಎಸ್‌ಐ ಪುರುಷೋತ್ತಮ್‌ ಮತ್ತು ಸಿಬಂದಿಗಳಾದ ಪ್ರವೀಣ್‌, ರಾಜೇಶ್‌ ಮತ್ತು ನಾರಾಯಣ್‌ ಅವರು ಅಚ್ಚಡ ಕ್ರಾಸ್‌ ಬಳಿ ಸ್ಕೂಟಿಯನ್ನು ಅಡ್ಡ ಹಾಕಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ವೇಳೆ ಹಣ, ಮತ್ತು ಬಂಗಾರ ಅಡವಿಟ್ಟ ಚೀಟಿಗಳು ದೊರಕಿದ್ದವು.

ಆ ಬಳಿಕ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಿದಾಗ ಅನಿತಾ ಅವರ ಮನೆಯಲ್ಲಿ ತಾನೇ ಕಳ್ಳತನ ನಡೆಸಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿಯತೆ ವಿವಿಧ ಸಹಕಾರಿ ಸಂಘಗಳು, ಫೈನಾನ್ಸ್‌ಗಳು, ಚಿನ್ನಾಭರಣ ಅಂಗಡಿಗಳಿಗೆ ತೆರಳಿದ ಪೊಲೀಸರು ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಕ್ಷಯ್ ಎಂ. ಹಾಕೆ, ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಕಾರ್ಕಳ ಉಪವಿಭಾಗದ ಡಿವೈಎಸ್ಪಿ ಅರವಿಂದಕಲಗುಜ್ಜಿ, ಮಾರ್ಗದರ್ಶನದಲ್ಲಿ ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಸಿ.ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಾಪು ಠಾಣೆ ತನಿಖಾ ವಿಭಾಗದ ಪಿಎಸ್ಐ ಪುರುಷೋತ್ತಮ್ ಸಹಕಾರದಿಂದ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್ ಕಾಪು ವೃತ್ತ, ರಾಜೇಶ ಪಡುಬಿದ್ರಿ ಠಾಣೆ, ನಾರಾಯಣ ಕಾಪು ಠಾಣೆರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು. ಶ್ರೀಧರ್, ಸುಧಾಕರ್ ಹಾಗೂ ಚಾಲಕರಾದ ಪ್ರಸಾದ್ ಕಾರ್ಯಾಚರಣೆಗೆ ಸಹಕರಿಸಿದ್ದಾರೆ.

Comments are closed.