ಉಡುಪಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೂಕ್ತ ನ್ಯಾಯ ಒದಗಿಸಲು ಆಗ್ರಹಿಸಿ ಜಿಲ್ಲೆಯ ಸಾಲಿಗ್ರಾಮ ಪೇಟೆಯಲ್ಲಿ ಶನಿವಾರ ಸಂಜೆ ‘ಸೌಜನ್ಯಾ ಹೆಣ್ಣಲ್ಲವೇ’ ಪ್ರತಿಭಟನಾ ಸಭೆ ನಡೆಯಿತು. ಇದಕ್ಕೂ ಮೊದಲು ಸಾಲಿಗ್ರಾಮದ ಶ್ರೀ ಗುರು ನರಸಿಂಹ ಮತ್ತು ಆಂಜನೇಯ ಸ್ವಾಮಿ ದೇವಳದಲ್ಲಿ ಸೌಜನ್ಯ ತಾಯಿ ಕುಸುಮಾ ತನ್ನ ಮಗಳ ಹತ್ಯೆ ಮತ್ತು ಅತ್ಯಾಚಾರಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ದೇವರುಗಳಲ್ಲಿ ಪ್ರಾರ್ಥಿಸಿದರು.

ನಂತರ ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸೌಜನ್ಯಾ ತಾಯಿ ಕುಸುಮಾ, ನನ್ನ ಮಗಳಿಗಾದ ಅನ್ಯಾಯದ ಬಗ್ಗೆ ಕಳೆದ 11 ವರ್ಷದಿಂದ ಹೋರಾಟ ಮಾಡುತ್ತಿದ್ದು ನ್ಯಾಯ ಸಿಗುವ ತನಕ ಹೋರಾಟ ನಿರಂತರವಾಗಿರುತ್ತದೆ. ಆರೋಪಿಗಳ ಹೆಸರನ್ನು ನಾನು ಬಹಿರಂಗಪಡಿಸಿದ್ದೇನೆ. ಸೌಜನ್ಯಾ ಮನೆಯವರು ಆಕೆ ಹೆಸರು ಹೇಳಿಕೊಂಡು ಮನೆ ನಿರ್ಮಿಸಿದ್ದಾರೆ ಎಂದು ಆರೋಪಿಸುವರು ಸಾಲದ ಬಗ್ಗೆ ವಿವರ ಪಡೆದು ಸಾಲ ಕಟ್ಟಲಿ ಎಂದು ಕಣ್ಣೀರಿಟ್ಟರು.
ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಅಂಬಿಕ ವಿ.ಪ್ರಭು ಮಾತನಾಡಿ, ಸೌಜನ್ಯಾ ತಾಯಿ ಸಹಿತ ಈ ಪ್ರಕರಣದಲ್ಲಿ ಹೋರಾಡುವರನ್ನು, ಮಾತಾಡುವರನ್ನು ಬೇರೆಬೇರೆ ರೀತಿ ನಿಂಧಿಸಲಾಗುತ್ತಿದೆ. ಮನೆಯ ಹೆಣ್ಮಗಳು ಸುಕ್ಷಿತರಾಗಿರಬೇಕಾದರೆ ಮನೆಮನೆಯಲ್ಲೂ ಹೋರಾಟ ಅಗತ್ಯ. ಇದಕ್ಕಾಗಿ ಜನರ ಬೆಂಬಲ ಅಗತ್ಯ. ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಹೋರಾಟ ಕೂಡ ನಡೆಸಲಾಗುತ್ತದೆ. ಸೌಜನ್ಯಾ ಪ್ರಕರಣ ಇನ್ನೂ ಮುಗಿದಿಲ್ಲ, ಗ್ರಾಮಗ್ರಾಮದಲ್ಲಿಯೂ ಜನ ನ್ಯಾಯ ಕೇಳುತ್ತಿದ್ದು ಗೃಹಸಚಿವರು ಮರು ತನಿಖೆ ಮಾಡೋದಿಲ್ಲ ಎಂಬ ಹೇಳಿಕೆ ಕೊಟ್ಟಿರುವುದು ಸಮಂಜಸವಲ್ಲ ಎಂದರು.
ಸಾಮಾಜಿಕ ಹೋರಾಟಗಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಗಾಣಿಗ ಮಾತನಾಡಿ, ಬೆದರಿಕೆ ಕರೆಗಳು ಬರುತ್ತಿದ್ದು ಸೌಜನ್ಯಾ ಕುಟುಂಬಕ್ಕೆ ನ್ಯಾಯ ಕೊಡುವುದು ನಿಶ್ಚಿತ. ಪ್ರಕರಣದ ದಿಕ್ಕು ತಪ್ಪಿಸುವರು ದಾಖಲಾತಿಯೊಂದಿಗೆ ಮಾತನಾಡಲಿ. ಸೌಜನ್ಯಾ ತಾಯಿ ಮೇಲೆ ಆರೋಪ ಮಾಡುವ ಮೊದಲು ಪೂರ್ವಪರ ತಿಳಿದು ಮಾತನಾಡಬೇಕು. ಜನರ ದಿಕ್ಕುತಪ್ಪಿಸುವ ಯಾವುದೇ ಅಡೆತಡೆಗಳು ಬಂದರೂ ಕೂಡ ಸೌಜನ್ಯಾ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.
ಸೌಜನ್ಯಾ ಮಾವ ವಿಠಲ ಗೌಡ, ಸಾಮಾಜಿಕ ಕಾರ್ಯಕರ್ತ ಸುಧೀರ್ ಮಲ್ಯಾಡಿ ಇದ್ದರು. ನಾಗರಾಜ ಗಾಣಿಗ ಪ್ರಾಸ್ತಾವಿಕ ಮಾತನ್ನಾಡಿದರು. ಪ್ರಸಾದ ಬಿಲ್ಲವ ಸ್ವಾಗತಿಸಿ, ನಿರೂಪಿಸಿದರು.
Comments are closed.