ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ( ಕ್ವಾಲಿಟಿ ಚೆಕ್ಕಿಂಗ್ ಸೆಂಟರ್) ಶುಕ್ರವಾರ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಹಿಳಾ ಉದ್ಯೋಗಿಗಳೂ ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.

ಬೆಳಗಾವಿಯಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿದರು. ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಗಾಯಾಳುಗಳನ್ನು 48 ಗಂಟೆಗಳ ಕಾಲ ನಿಗಾದಲ್ಲಿಇರಿಸಿರುವುದಾಗಿ ವೈದ್ಯರು ಹೇಳಿದ್ದಾರೆ. ಒಬ್ಬರಿಗೆ ಶೇ 38ರಷ್ಟು ಸುಟ್ಟಗಾಯಗಳಾಗಿವೆ. ಎಲ್ಲ ಗಾಯಾಳುಗಳನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಸೂಚಿಸಿದ್ದೇನೆ. ಜತೆಗೆ ಘಟನೆ ಹೇಗೆ ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದೇನೆ ಎಂದರು.
ಇಬ್ಬರು ಗಂಭೀರ
ದುರ್ಘಟನೆಯಲ್ಲಿ ಗಾಯಗೊಂಡಿರುವ ಪ್ರಯೋಗಾಲಯದ ಮುಖ್ಯ ಎಂಜಿನಿಯರ್ ಶಿವಕುಮಾರ್, ಕಾರ್ಯಪಾಲಕ ಎಂಜಿನಿಯರ್ಗಳಾದ ಕಿರಣ್, ಸಂತೋಷ್ಕುಮಾರ್, ವಿಜಯಮಾಲ, ಶ್ರೀಧರ್, ಎಫ್ಡಿಸಿ ಸಿರಾಜ್, ಆಪರೇಟರ್ ಜ್ಯೋತಿ, ಗಣಕಯಂತ್ರ ನಿರ್ವಾಹಕ ಮನೋಜ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಶ್ರೀನಿವಾಸ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಕೈ, ಕಾಲು ಹಾಗೂ ಮುಖ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ರಸ್ತೆ ಡಾಂಬರೀಕರಣಕ್ಕೆ ಬಳಸಿದ್ದ ಬಿಟುಮಿನ್ ಮಿಶ್ರಣದ ಗುಣಮಟ್ಟ ಪರೀಕ್ಷಿಸುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಬಳಿಕ ಅಗ್ನಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವರಾದ ಕೆ.ಜೆ.ಜಾರ್ಜ್ ಮತ್ತು ಭೈರತಿ ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದರು. ಬೆಂಕಿಯಿಂದ ಗಾಯಗೊಂಡಿರುವವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಪೊಲೀಸರು, ಪಾಲಿಕೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡುತ್ತಿದ್ದಾರೆ ಎಂದರು.
ಅಧಿಕಾರಿ, ಸಿಬ್ಬಂದಿಗೆ ಶೇ 35 ರಿಂದ 40ರಷ್ಟು ಸುಟ್ಟ ಗಾಯಗಳಾಗಿವೆ. ಕೆಲವರಿಗೆ ದೇಹದ ಒಳಭಾಗದಲ್ಲಿ ಗಾಯಗಳಾಗಿವೆ. ಕಣ್ಣುಗಳಿಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಮೂವರ ಮುಖಗಳು ಸುಟ್ಟು ಹೋಗಿವೆ ಎನ್ನಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಗುಣ ನಿಯಂತ್ರಣ ಪ್ರಯೋಗಾಲಯದ ಅಗ್ನಿ ಅವಘಡದ ಕಾರಣಕ್ಕಾಗಿ ಆಂತರಿಕ ತಾಂತ್ರಿಕ ವಿಚಾರಣೆ ನಡೆಸಲು ಪಾಲಿಕೆ ಇಂಜಿನಿಯರ್-ಇನ್-ಚೀಫ್ ಬಿ.ಎಸ್.ಪ್ರಹಲ್ಲಾದ್ ಅವರನ್ನು ನೇಮಿಸಲಾಗಿದೆ.
Comments are closed.