ಕುಂದಾಪುರ: ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದ ಘಟನೆ ಜೂ.12ರಂದು ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಶಿವಮೊಗ್ಗ ಮೂಲದವರಾದ ನಿರಂಜನ್ ಎಸ್ (26), ಮಿಲನ್ ಮೋನಿಶ್ ಶೆಟ್ಟಿ (27), ಪೃಥ್ವಿ ಡಾಮಿಕ್ (31) ಎನ್ನುವವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದು ಅವರಿಂದ ಸುಮಾರು 3 ಕೆ.ಜಿ 910 ಗ್ರಾಂ ತೂಕದ ತಿಮಿಂಗಲದ ಅಂಬರ್‌ಗ್ರಿಸ್ ಎನ್ನುವಂತಿರುವ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಉಪನಿರೀಕ್ಷಕ ನಿರಂಜನ್ ಗೌಡ, ಸಿಬ್ಬಂದಿಗಳಾದ ಅಶೋಕ್, ಶ್ರೀನಿವಾಸ್, ಸುಜಿತ್ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್ಚರಿಕೆಯಿಂದಿರಲು ಪೊಲೀಸರ ಸೂಚನೆ
ಈ ರೀತಿ ಮೇಣದಂತಹ ವಸ್ತುವಿಗೆ ತಿಮಿಂಗಲದ ಅಂಬರ್‌ಗ್ರಿಸ್ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಸಕ್ರಿಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಂದ ಇರುವಂತೆ ಹಾಗೂ ಈ ರೀತಿಯ ಯಾವುದೇ ಆಮಿಷಕ್ಕೆ ಒಳಗಾಗಬಾರದೆಂದು ಮತ್ತು ಈ ರೀತಿಯ ಯಾವುದೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
Comments are closed.