ಕರಾವಳಿ

ಕೆಸರುಮಯವಾದ ಮಾವಿನಕಟ್ಟೆ ಕೋಳಿಫಾರ್ಮ್ – ಹೆಮ್ಮಾಡಿ-ಕೊಲ್ಲೂರು ಸಂಪರ್ಕ ರಸ್ತೆ; ವಾಹನ ಸವಾರರು ಹೈರಾಣ..!

Pinterest LinkedIn Tumblr

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕೆಸರುಮಯವಾದ ಗಂಡಾಗುಂಡಿ ರಸ್ತೆಯಲ್ಲಿ ಅಪಾಯಕಾರಿ ಪಯಣ…ಕೊಂಚ ಯಾಮಾರಿದರೂ ಅಪಾಯ ಖಂಡಿತ. ಹತ್ತಾರು ಊರುಗಳ ಸಂಪರ್ಕ ಕೊಂಡಿಯಾಗಿ 2.5 ಕಿ.ಮೀ ರಸ್ತೆ ಮಾಡಿದರೂ ಸವಾರರು ಹಾಗೂ ಸ್ಥಳೀಯರಿಗೆ ಸಿಕ್ಕಿಲ್ಲ ನೆಮ್ಮದಿ.

ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಲ್ವಾಡಿ ಮಾವಿನಕಟ್ಟೆ ಕೋಳಿಪಾರ್ಮ್ ಮೂಲಕ ಹೆಮ್ಮಾಡಿ-ಕೊಲ್ಲೂರು ಮುಖ್ಯರಸ್ತೆ ಸಂಪರ್ಕಿಸುವ ಹತ್ತೂರ ಜನರ ಸಂಪರ್ಕಕೊಂಡಿಯಿದ್ದು ಇಲ್ಲದಂತಾಗಿದೆ. ಕೋಳಿಫಾರ್ಮ್ ನಿಂದ ಹೆಮ್ಮಾಡಿ-ಕೊಲ್ಲೂರು ಮುಖ್ಯ ರಸ್ತೆ ಸಂಪರ್ಕ ರಸ್ತೆಯ ಜಾಡಿ ಹೊಳೆ ಬಳಿ ಅಂಗಡಿಮನೆ ಎಂಬಲ್ಲಿ 100 ಮೀಟರ್ ಉದ್ದ ರಸ್ತೆ ಕೆಲಸ ಬಾಕಿ ಉಳಿಸಿದ್ದರಿಂದ ಇತ್ತೀಚೆಗೆ ಬೇಸಿಗೆಯಲ್ಲಿ ದೂಳಿನ ಸಮಸ್ಯೆಯಿಂದ ಜನರು ಸಮಸ್ಯೆ ಅನುಭವಿಸಿದ್ದಲ್ಲದೆ ಮಳೆಗಾಲದಲ್ಲಿ ಕೆಸರು ರಾಡಿಯಲ್ಲಿ ಸಂಚರಿಸಲಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಹಟ್ಟಿಯಂಗಡಿ ಗ್ರಾ.ಪಂ ಮತ್ತು ಕರ್ಕುಂಜೆ ಗ್ರಾಪಂ ಗಡಿ ಭಾಗವಾದ ಇಲ್ಲಿ ಸೇತುವೆ ಮತ್ತು ಡ್ಯಾಂ ಪ್ರದೇಶ ಸಮಸ್ಯೆ ಕೇಂದ್ರ ಬಿಂಧುವಾಗಿದೆ.

ಇಲ್ಲಿ 40 ಕ್ಕೂ ಅಧಿಕ ಎಸ್ಸಿ-ಎಸ್ಟಿ ಮನೆಗಳಿದೆ. ನೂರಾರು ಮಂದಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ರಸ್ತೆ ಅವಲಂಬಿಸಿದ್ದಾರೆ. ಇಲ್ಲಿನ ಜನರು ಗುಲ್ವಾಡಿ ಸಮೀಪಕ್ಕೆ ತೆರಳಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ತರಲು ಇದು ಸುಲಭ ಮಾರ್ಗವಾಗಿದ್ದು ಕೇವಲ 2.5 ಕಿ.ಮೀ ದೂರ. ಒಂದೊಮ್ಮೆ ನೆಂಪು ಸರ್ಕಲ್ ನಿಂದ ನೇರಳಕಟ್ಟೆ ಮಾರ್ಗವಾಗಿ ಪ್ರಮುಖ ಕೇಂದ್ರಕ್ಕೆ ತೆರಳಬೇಕಾದರೆ 7-8 ಕಿ.ಮೀ ಸುತ್ತುಹಾಕಬೇಕು. ಈ ರಸ್ತೆಯಲ್ಲಿ ಕೊಲ್ಲೂರು-ಹೆಮ್ಮಾಡಿ ಮಾರ್ಗವಾಗಿ ಸೌಕೂರು, ನೇರಳಕಟ್ಟೆ, ಅಂಪಾರು ಮೂಲಕ ಸಾಗಿದರೆ ಮಲೆನಾಡು ಸಂಪರ್ಕ ಹತ್ತಿರ. ಗುಲ್ವಾಡಿ, ಕರ್ಕಿ, ಹಟ್ಟಿಯಂಗಡಿ, ತಲ್ಲೂರು ಮೂಲಕ ಕುಂದಾಪುರ ನಗರ ತಲುಪಲು ಸುಲಭ ಮಾರ್ಗ. ಹಾಗೆಯೇ ಕೊಲ್ಲೂರು ರಸ್ತೆ ಸಂಪರ್ಕಕ್ಕೆ ಬಂದರೆ ಒಂದೆಡೆ ಹೆಮ್ಮಾಡಿ ಮೂಲಕ ಬೈಂದೂರು ಸಂಪರ್ಕ ಸುಲಭ. ವಂಡ್ಸೆ, ಮಾರಣಕಟ್ಟೆ, ಕೊಲ್ಲೂರು, ಕೆರಾಡಿ ಮಾರ್ಗವಾಗಿ ಮಲೆನಾಡು ಹತ್ತಿರದ ದಾರಿ.

ಜನರ ಆಗ್ರಹ..!
ಈ ಭಾಗದ ಎಸ್ಸಿ-ಎಸ್ಟಿ ಮನೆಗಳ ಸಹಿತ ನೂರಾರು ಮ‌ನೆಯವರು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗೆ ಮಳೆಗಾಲದಲ್ಲಿ ಏಳೆಂಟು ಕಿ.ಮೀ ಸುತ್ತು ಹಾಕಿ ಹೋಗಬೇಕಿತ್ತು. ಈ ರಸ್ತೆ ನಿರ್ಮಾಣ ನಿಜಕ್ಕೂ ಅನುಕೂಲವಾಗಬೇಕಿತ್ತು. ಆದರೆ ಅರೆಬರೆ ಕೆಲಸ ಇಲ್ಲಿನ ಜನರಿಗೆ ಶಾಪವಾಗಿದೆ. ಇನ್ನು ಈ ರಸ್ತೆ ಕಾಮಗಾರಿ ಸಲುವಾಗಿ ಸ್ಥಳೀಯರಾದ ನಿವೃತ್ತ ಪ್ರಾಂಶುಪಾಲ ವೈ. ರಾಜೀವ ಶೆಟ್ಟಿ ಅವರು ತಮ್ಮ ಪಟ್ಟಾ ಜಾಗವನ್ನು ಕೂಡ ನೀಡಿ ಸಹಕಾರ ನೀಡಿದ್ದರು. ಇಲ್ಲಿನ ಸೇತುವೆ ಇಕ್ಕೆಲಗಳ ನಡುವಿನ ರಸ್ತೆ ಕೆಲಸ ಅರ್ಧಂಬರ್ದ ಮಾಡಿದ್ದರಿಂದ ಈ ತೊಂದರೆಯಾಗಿದ್ದು ಕೂಡಲೇ ಸರಕಾರ ಹಾಗೂ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಿತ್ಯ ಹಲವು ವಿದ್ಯಾರ್ಥಿಗಳು ಕಾಲ್ನಡಿಗೆ, ಆಟೋ ಹಾಗೂ ಶಾಲಾ ಬಸ್ಸಿನ ಮೂಲಕ ಇದೇ ರಸ್ತೆಯಲ್ಲಿ ಆತಂಕಕಾರಿ ಸಂಚಾರ ಮಾಡಬೇಕು. ಎರಡು ಗ್ರಾಮಪಂಚಾಯತ್ ಗಮನಕ್ಕೆ ತಂದಿದ್ದು ಅವರು ಸಬೂಬು ಹೇಳುತ್ತಿದ್ದಾರೆ. ಮಳೆಗಾಲದಲ್ಲಿ ವಿಪರೀತ ಸಮಸ್ಯೆಯಾಗುತ್ತಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುವುದು ತ್ರಾಸದಾಯಕವಾಗಿದೆ.
ಸತೀಶ್ (ರಿಕ್ಷಾ ಚಾಲಕ)

ಜನರಿಗೆ ಬಹಳಷ್ಟು ಅನುಕೂಲವಾಗುವ ರಸ್ತೆಯಿದು. ಸರಕಾರದಿಂದ ಒಂದಷ್ಟು ಅನುದಾನ ಬಂದು ರಸ್ತೆ ನಿರ್ಮಾಣವಾಗಿದ್ದರೂ ಕೂಡ ಕೆಲವು ಮೀಟರ್ ರಸ್ತೆ ನಿರ್ಮಾಣ ಮಾಡದೆ ಇರುವುದರಿಂದ ಈ ಕೆಲಸ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
– ಶಶಿಧರ್ ಶೆಟ್ಟಿ (ಸ್ಥಳೀಯರು)

Comments are closed.