ಕರಾವಳಿ

ಕೊರಗ ಕುಟುಂಬಗಳ ಬೇಡಿಕೆ ಈಡೇರಿಸಲು, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಾಡ ಗ್ರಾ.ಪಂ ಎದುರು ನಡೆದ ಧರಣಿ ಸತ್ಯಾಗ್ರಹ ಅಂತ್ಯ | ಜುಲೈ.5 ಕ್ಕೆ ಡಿಸಿ ನೇತೃತ್ವ ಸಭೆ

Pinterest LinkedIn Tumblr

ಕುಂದಾಪುರ: ಡಾಕ್ಟರ್ ಮಹಮ್ಮದ್ ಪೀರ್ ವರದಿಯಂತೆ ಪ್ರತಿ ಕೊರಗ ಕುಟುಂಬಗಳಿಗೆ ಭೂಮಿಯನ್ನು ನೀಡಲು ಹಾಗೂ ನಾಡ ಗ್ರಾಮದ ಪಡುಕೋಣೆ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದಗಳು, ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಾಡ ಗ್ರಾಮ ಪಂಚಾಯತ್ ಎದುರು ಜೂ.14 ಬುಧವಾರ ಬೆಳಿಗ್ಗೆನಿಂದ ಆರಂಭವಾಗಿದೆ.

ಮೂಲನಿವಾಸಿಗಳಾದ ಪರಿಶಿಷ್ಟ ಪಂಗಡದ ಕೊರಗ ಸಮುದಾದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ತಿರ್ವಗತಿಯಲ್ಲಿ ಕಡಿಮೆಯಾಗಿ ಅಳಿವಿನಂಚಿಗೆ ಸಾಗುತ್ತಿದೆ. ಸಮುದಾಯವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಕೊರಗ ಸಮುದಾಯದ ಮೇಲೆ ವಿಶೇಷ ಗಮನ ನೀಡುವುದು ಅಗತ್ಯವಿದೆ. ಕೊರಗ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರಕಾರ 1994 ರಲ್ಲಿ ಡಾಕ್ಟರ್ ಮಹಮ್ಮದ್ ಪೀರ್ ಆಯೋಗದ ವರದಿ ಅಂಗೀಕರಿಸಿದೆ. ಆದರೆ ಡಾಕ್ಟರ್ ಮಹಮ್ಮದ್ ಪೀರ್ ವರದಿ ಜಾರಿಗೆ ತರುವಲ್ಲಿ ಸರಕಾರ ವಿಫಲವಾಗಿದೆ. ಈ ವರದಿ ಅನ್ವಯ ಪ್ರತಿ ಕೊರಗ ಕುಟುಂಬಗಳಿಗೆ 2.50 ಎಕರೆ ಭೂಮಿಯನ್ನು ನೀಡಬೇಕು ಎನ್ನುವುದು ನಮ್ಮ ಬಹು ಮುಖ್ಯ ಬೇಡಿಕೆಯಾಗಿದ್ದು ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದಗಳು, ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಧಿಕಾರಿಗಳು ತುರ್ತು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವುದು ಅಗತ್ಯವಿದೆ. ಈ ಹಿನ್ನೆಲೆ ಕೊರಗ ಸಮುದಾಯ ಭೂಮಿಯ ಹಕ್ಕಿಗಾಗಿ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ ವಿವರಿಸಿದರು.

ಕೊರಗ ಶ್ರೆಯೋಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಗಣೇಶ ವಿ. ಕೊರಗ, ಉಡುಪಿ ಜಿಲ್ಲಾ ಕೊರಗ ಸಂಘಟನೆ ಜಿಲ್ಲಾ ಅಧ್ಯಕ್ಷೆ ಗೌರಿ ಕೆಂಜೂರು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಶ್ರೀಧರ ನಾಡ, ಬೈಂದೂರು ತಾಲೂಕು ಸಿಐಟಿಯು ಬೆಂಬಲಿತ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ರಾಜು ಪಡುಕೋಣೆ, ಕೃಷಿಕೂಲಿಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಬೈಂದೂರು ತಾಲೂಕು ಕೃಷಿಕೂಲಿಗಾರರ ಸಂಘದ ಕಾರ್ಯದರ್ಶಿ ನಾಗರತ್ನ ನಾಡ, ಸುಶಿಲಾ, ಪ್ರಮುಖರಾದ ಚಂದ್ರಶೇಖರ, ಶೋಭಾ, ಸುನೀತಾ, ಮಮತಾ, ಹೊನ್ನಮ, ಮಹಾಬಲ ಇತರರು ಹೋರಾಟದ ನೇತೃತ್ವ ವಹಿಸಿದ್ದರು.

ಧರಣಿ ನಿರತರ ಪ್ರಮುಖ ಬೇಡಿಕೆಗಳು:
ಡಾಕ್ಟರ್ ಮಹಮದ್ ಪೀರ್ ವರದಿ ಪ್ರಕಾರ ಪ್ರತಿ ಕೊರಗ ಸಮುದಾಯದ ಕುಟುಂಬಗಳಿಗೆ ತಲಾ 2.50 ಎಕರೆ ಭೂಮಿಯನ್ನು ನೀಡಬೇಕು.

ಅನಾಧಿಕಾಲದಿಂದ ಕೊರಗ ಸಮುದಾಯದ ಸ್ವಾಧೀನ ಇರುವ ಪಡುಕೋಣೆ ಕೊರಗ ಕುಟುಂಬಗಳ ಭೂಮಿಯ ವಿವಾದ ಬಗೆಹರಿಸಿ ಭೂಮಿಯ ಸಂಪೂರ್ಣ ಹಕ್ಕು ನೀಡುವುದು.

ಕೊರಗರ ಕಂದಾಯ ಅದಾಲತ್ ನಲ್ಲಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಹಕ್ಕುಪತ್ರ ನೀಡಬೇಕು.

ನಾಡಗ್ರಾಮದ ಸರ್ವೇ ನಂಬರ್ 183/11 ರಲ್ಲಿ ವಾಸವಿರುವ ಕೊರಗ ಸಮುದಾಯದಲ್ಲಿ ಭೂಮಿಯ ಆರ್.ಟಿ.ಸಿ ಇದ್ದರು ಸಹ ಇದುವರೆಗೆ 1 ರಿಂದ 5 ಮಾಡಿ ನಕ್ಷೆ ಕಟ್ ಆಗಿರುದಿಲ್ಲ. ಆದರಿಂದ ನಕ್ಷೆ ಮಾಡಲು ಕ್ರಮ ವಹಿಸಬೇಕು.

ಈ ಎಲ್ಲಾ ಬೇಡಿಕೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೊರಗ ಸಮುದಾಯದ ಮುಖಂಡರು ಮತ್ತು ಪಡುಕೋಣೆ ಕೊರಗ ಸಮುದಾಯದ ಭೂಮಿಗೆ ಸಂಬಂಧಿಸಿದ ವಿವಾದದ ಎದುರುದಾರರ ಜೊತೆಗೆ ಜಂಟಿ ಸಭೆಯನ್ನು ಕರೆದು ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮಕೈಗೊಳ್ಳಬೇಕು.

ಗ್ರಾ‌ಪಂ ಎದುರೇ ಅಡುಗೆ, ಮಗುವಿಗೆ ತೊಟ್ಟಿಲು..!
ಬೆಳಿಗ್ಗೆ 11 ಗಂಟೆ ಹೊತ್ತಿಗೆ ಪಡುಕೋಣೆ ಕೊರಗ ಸಮುದಾಯದ ನಿವಾಸದಿಂದ ಸಾಂಪ್ರದಾಯಿಕ ವಾದನಗಳಾದ ಡೋಲು, ಕೊಳಲು ನಾದದೊಂದಿಗೆ ನೂರಾರು ಮಂದಿ ಕೊರಗರು ನಾಡ ಗ್ರಾ.ಪಂ ಕಚೇರಿ ತನಕ ಆಗಮಿಸಿದ್ದು ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸಿ ತಮ್ಮ ಅಹವಾಲು ಸ್ವೀಕರಿಸಿ ಕ್ರಮವಹಿಸಬೇಕು ಎಂದು ತಿಳಿಸಿದರು. ಡಿಸಿ ಆಗಮನ ವಿಳಂಭವಾಗುವ ಮಾಹಿತಿ ಸಿಗುತ್ತಿದ್ದಂತೆಯೇ ಅನಿರ್ಧಿಷ್ಟಾವಧಿ ಧರಣಿ ಮುಂದುವರೆಯುವ ಸಾಧ್ಯತೆ ಇದ್ದರಿಂದ ಗ್ಯಾಸ್ ಒಲೆ ತರಿಸಿ, ಗ್ರಾ.ಪಂ ಎದುರೆ ಗಂಜಿ ಊಟ ತಯಾರಿಸಿ ಧರಣಿ ನಿರತರು ಮಧ್ಯಾಹ್ನ ಊಟ ಮಾಡಿದರು. ಇನ್ನು ಮಧ್ಯಾಹ್ನದ ನಂತರವೂ ಪ್ರತಿಭಟನೆ ಮುಂದುವರೆದಿದ್ದುವ ಆಗಮಿಸಿದ್ದ ಮಹಿಳೆಯೊಬ್ಬರು ಪಂಚಾಯಿತಿ ಎದುರಲ್ಲೇ ತೊಟ್ಟಿಲು (ಸೀರೆ ಜೋಲಿ) ಕಟ್ಟಿ ಮಗುವನ್ನ ಮಲಗಿಸಿದರು.

ಮನವಿ ಸ್ವೀಕಾರ:
ಇದೇ ಸಂದರ್ಭ ಧರಣಿ ಸ್ಥಳಕ್ಕೆ ಆಗಮಿಸಿದ ಬೈಂದೂರು ತಹಶಿಲ್ದಾರ್ ಶ್ರೀಕಾಂತ್ ಹೆಗ್ಡೆ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ವಿಚಾರ ತರುವುದಾಗಿ ಭರವಸೆ ನೀಡಿದರು. ನಾಡ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್, ಗ್ರಾ.ಪಂ ಅಧ್ಯಕ್ಷ ದಿನೇಶ್ ಶೆಟ್ಟಿ ಇದ್ದರು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ
ಯೋಜನಾ ಸಮನ್ವಯ ಅಧಿಕಾರಿ ದುದ್ ಫೀರ್, ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಣೆಕರ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ಧರಣಿ ವಾಪಾಸ್:
ಜೂ.14ಬುಧವಾರದಂದು ಬೈಂದೂರು ತಾಲೂಕು ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಇವರು ಕೊರಗರ ಭೂಮಿ ಸಮಸ್ಯೆ ಹಾಗೂ ವಿವಿಧ ಬೇಡಿಕೆಗೆ ಸಂಬಂಧ ಪಟ್ಟಂತೆ ಧರಣಿ ಸತ್ಯಾಗ್ರಹವನ್ನು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಕೈಗೊಂಡಿದ್ದು, ಈ ಮುಷ್ಕರಕ್ಕೆ ಸಂಬಂದಪಟ್ಟಂತೆ ಕೊರಗರ ವಿವಿಧ ಬೇಡಿಕೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣ ಉಡುಪಿ ಯಲ್ಲಿ ದಿನಾಂಕ ಜುಲೈ 5 ಬುಧವಾರ ಬೆಳಿಗ್ಗೆ 11.00 ಘಂಟೆಗೆ ಸಭೆ ನಡೆಸಲು ದಿನಾಂಕವನ್ನು ನಿಗದಿ ಪಡಿಸಿ ಸಮುದಾಯದ ಮುಖಂಡರಿಗೆ ತಿಳಿಸಿ ಮುಷ್ಕರವನ್ನು ಕೈ ಬಿಡುವಂತೆ ಕೋರಿದ ಹಿನ್ನೆಲೆ ಸಂಜೆ 6 ಗಂಟೆ ಬಳಿಕ ಧರಣಿಯನ್ನು ವಾಪಾಸ್ ಪಡೆಯಲಾಯಿತು.

ನಾಡ ಗ್ರಾ.ಪಂ ವ್ಯಾಪ್ತಿಯಲ್ಲಿ ಭೂಮಿಯಿಲ್ಲದಿರುವ 40 ಕುಟುಂಬಗಳಿದೆ. ಮಹಮ್ಮದ್ ಫಿರ್ ವರದಿಯಂತೆ ಕೊರಗರಿಗೆ ಭೂಮಿ ನೀಡಿ ಕೃಷಿಗೆ ಉತ್ತೇಜಿಸಿ ಸ್ವಾವಲಂಬಿ ಬದುಕು ಸಾಗಿಸಲು ಅವಕಾಶ ಕಲ್ಪಿಸಬೇಕೆಂದಿದೆ. ಈ ಹಿಂದೆ ಜಿಲ್ಲೆಯಲ್ಲಿ ಹಲವೆಡೆ ಭೂಮಿ ನೀಡಿದ್ದು ನಾಡದಲ್ಲಿ ಕೊರಗರಿಗೆ ಭೂಮಿ ನೀಡದೆ ವಂಚಿಸಲಾಗಿದೆ. ಭೂಮಿ ಸಮಸ್ಯೆ, ಕೊರಗರ ಆರೋಗ್ಯ ಭದ್ರತೆ ವಿಚಾರದಲ್ಲಿ ಸರಕಾರ, ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು.
-ಗಣೇಶ ವಿ. ಕೊರಗ, ಕೊರಗ ಶ್ರೆಯೋಭಿವೃದ್ಧಿ ಸಂಘದ ಕುಂದಾಪುರ ತಾಲೂಕು ಅಧ್ಯಕ್ಷ

ಭೂಮಿ, ಪಡಿತರ ಚೀಟಿ, ಜಾತಿ ಸರ್ಟಿಫಿಕೇಟ್ ಪಡೆಯಲು ಸಹಿತ ಎಲ್ಲಾ ಅಗತ್ಯ ಸೌಕರ್ಯ ಪಡೆಯಲು ಕೊರಗರ ಸಮುದಾಯ ಹೋರಾಟ ಮುಖಾಂತರವೇ ಪಡೆದುಕೊಳ್ಳಬೇಕಿದೆ. ಯಾರೊಂದಿಗೂ ಘರ್ಷಣೆ ಮಾಡದೆ ಶಾಂತಿಯುತವಾಗಿ ಕೇಳುತ್ತಿದ್ದೇವೆ. ಸಮುದಾಯದ ಬಂದುಗಳು ಶಕ್ತಿಯುತವಾಗಿ ಹೋರಾಟ ಮಾಡುತ್ತೇವೆ.
-ಉಡುಪಿ ಜಿಲ್ಲಾ ಕೊರಗ ಸಂಘಟನೆ ಜಿಲ್ಲಾ ಅಧ್ಯಕ್ಷೆ ಗೌರಿ ಕೆಂಜೂರು

ದೀನ-ದಲಿತರ, ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಹಲವು ಯೋಜನೆಗಳು ಪಡೆಯಲು ಹೋರಾಟ ಅನಿವಾರ್ಯವಾಗಿದೆ. ಈ ಹಿಂದೆ ಅರ್ಹರಿಗೆ ‌ನ್ಯಾಯ ಒದಗಿಸಲು ಜೈಲಿಗೂ ಹೋಗಿದ್ದೇವೆ. ಇನ್ನು ಕೂಡ ಹೋರಾಟ ಮುಂದುವರೆಯಲಿದೆ.
-ವೆಂಕಟೇಶ್ ಕೋಣಿ, ಕೃಷಿಕೂಲಿಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ

Comments are closed.