ಕರ್ನಾಟಕ

ಯಾರಾಗುತ್ತಾರೆ ಕರ್ನಾಟಕದ ಸಿಎಂ..?: ರಾಜಿ ಸಂಧಾನದ ಮೂಲಕ ಸಿದ್ದುಗೆ ಪಟ್ಟ ಕಟ್ಟುತ್ತಾ ಹೈಕಮಾಂಡ್..?

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಬಹಳಷ್ಟು ತಲೆಕೆಡಿಸಿಕೊಂಡಿದೆ. ಸ್ಪಷ್ಟ ಬಹುಮತ ಬಂದಿದ್ದು ಸಿಎಂ ಗಾದಿ ವಿಚಾರದಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಭೀತಿ ಎದುರಿಸುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ತಮ್ಮ ಪಟ್ಟು ಸಡಿಲಿಸದೆ ಇರುವುದು ಹೈಕಮಾಂಡ್ ತಲೆನೋವಿಗೆ ಕಾರಣವಾಗಿದೆ. ರಾಜಿ ಸಂಧಾನ ಸೂತ್ರದ ಮೂಲಕ ಸಿದ್ದರಾಮಯ್ಯ ಅವರಿಗೆ ಪಟ್ಟ ಕಟ್ಟುವುದು ಬಹುತೇಕ ಖಾತ್ರಿಯಾಗಿದೆ ಎಂದು ಮೂಲಗಳು ತಿಳಿಸಿದೆ.

ಸೋಮವಾರವೇ ಶಾಸಕರ ಜತೆಗೆ ದಿಲ್ಲಿಗೆ ತಲುಪಿರುವ ಸಿದ್ದರಾಮಯ್ಯ ವರಿಷ್ಠರ ಮನವೊಲಿಸುವ ತಂತ್ರಗಾರಿಕೆ ನಡೆಸಿದ್ದಾರೆ. ಇನ್ನೊಂದೆಡೆ, ಸಿಎಂ ಪಟ್ಟ ನನಗೆ ಕೊಡುವುದು ನ್ಯಾಯ ಎಂದು ಶಿವಕುಮಾರ್‌ ಬೆಂಗಳೂರಿನಲ್ಲೇ ಉಳಿದುಕೊಂಡು ತಮ್ಮದೆ ಮಾರ್ಗದಲ್ಲಿ ಲಾಬಿ ಮಾಡ್ತಾ ಇದಾರೆ. ಸೋನಿಯಾ ಗಾಂಧಿಯವರಿಗೆ ಕೊಟ್ಟ ಮಾತನ್ನು ನಾನು ಈಡೇರಿಸಿದ್ದೇನೆ. ನಾನು ಪಕ್ಷ ನಿಷ್ಠ. ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ’ ಎನ್ನುವ ಮೂಲಕ ಸಿದ್ದರಾಮಯ್ಯ ಆಯ್ಕೆಗೆ ಸ್ಪಷ್ಟ ವಿರೋಧ ತೋರಿದ್ದಾರೆ.

ಇಬ್ಬರಿಗೂ ಸಮ್ಮತವಾಗುವ ಸೂತ್ರ ರೂಪಿಸಲು ಚಿಂತನೆ ನಡೆಸಿದ್ದ ವರಿಷ್ಠರು, ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಇಬ್ಬರಿಗೂ ಹೊಸದಿಲ್ಲಿಗೆ ಬರುವಂತೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರ ಜತೆಗೆ ಸಭೆ ನಡೆಸಿದ ಸಿದ್ದರಾಮಯ್ಯ ಆಯ್ದ ಕೆಲವರ ಜತೆಗೆ ಹೊಸದಿಲ್ಲಿ ತಲುಪಿದ್ದರು. ಆದರೆ ಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಬೇರೆ ಯಾವ ಹುದ್ದೆಯೂ ಬೇಡ ಎಂದು ಪಟ್ಟು ಹಿಡಿದಿರುವ ಶಿವಕುಮಾರ್‌ ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಾರೆ. ಜತೆಗೆ ಸೋದರ ಡಿ.ಕೆ. ಸುರೇಶ್‌ ಜತೆ ಪ್ರತ್ಯೇಕ ಚರ್ಚೆ ನಡೆಸಿ ಸುರೇಶ್‌ ಅವರನ್ನು ದಿಲ್ಲಿಗೆ ಕಳುಹಿಸಿದ್ದಾರೆ‌.

ಖಾಸಗಿ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಸೋನಿಯಾ ಗಾಂಧಿಯವರು ನನ್ನ ಮೇಲೆ ಭರವಸೆ ಇಟ್ಟು ಪಕ್ಷದ ಸಾರಥ್ಯ ನೀಡಿದರು. ಅವರ ನಿರೀಕ್ಷೆಯಂತೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇನೆ. ನನಗೆ ದೇವರ ಮೇಲೆ ವಿಶ್ವಾಸವಿದೆ. ಗುರು ಅಜ್ಜಯ್ಯನವರ ಮಾರ್ಗದರ್ಶನವಿದೆ. ನಾನು ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ. ಆ ರೀತಿ ಮಾಡುವುದಕ್ಕೆ ನಾನು ಮಗುವಲ್ಲ. ನಾನು ಯಾರ ಬಲೆಯಲ್ಲೂ ಸಿಲುಕುವುದಿಲ್ಲ’ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ತಮ್ಮ ಬಳಿ ಶಾಸಕರ ಬಲವಿದೆ ಎಂದು ಹೊಸದಿಲ್ಲಿಯಲ್ಲಿ ನೀಡಿರುವ ಹೇಳಿಕೆಗೂ ತಿರುಗೇಟು ನೀಡಿರುವ ಅವರು, ಐ ವಿಶ್‌ ಹಿಮ್‌ ಆಲ್‌ ದಿ ಬೆಸ್ಟ್‌’ ಎಂದು ಹೇಳಿದ್ದಾರೆ.

 

Comments are closed.