ಕರಾವಳಿ

ವಾದಿರಾಜರ ಜೀವನ ಚರಿತ್ರೆ ಬೆಳ್ಳಿತೆರೆಗೆ; ಸೋದೆ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮಾಹಿತಿ

Pinterest LinkedIn Tumblr

ಕುಂದಾಪುರ: ಸೋದೆ ಮಠ ಸ್ವಾಮೀಜಿ ಅನುಗ್ರಹದಲ್ಲಿ ಗುರುಸಾರ್ವಭೌಮ ಶ್ರೀ ವಾದಿರಾಜ ಜೀವನ ಆಧಾರಿತ ಕನ್ನಡ ಚಲನಚಿತ್ರ ನಿರ್ಮಾಣವಾಗುತ್ತಿದ್ದು, ಅನುಭವಿ ನಿರ್ದೇಶಕ, ವಾದಿರಾಜರ ಭಕ್ತ ಹಯವದನ ನಿರ್ದೇಶಿಸುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಚಿತ್ರಿಸುವ ಭರವಸೆ ಸಿಕ್ಕಿರುವುದರಿಂದ ಸಿನಿಮಾ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸೋದೆ ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.

ತಾಲೂಕಿನ ಹೂವಿನಕರೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ವಾದಿರಾಜ ಸಿನಿಮಾ ಉಪದೇಶ ಮಾಡಲು ಮಾತ್ರ ಸೀಮಿತವಾದ ಸಿನಿಮಾ ಆಗಬಾರದು. ಜನರಿಗೆ, ಸಮಾಜಕ್ಕೆ ಏನು ಕೊಟ್ಟಿದ್ದಾರೆ, ಅವರ ವ್ಯಕ್ತಿತ್ವದ ಬಗ್ಗೆ ಸಾರುವ ಹಿನ್ನೆಲೆಯಲ್ಲಿ ನಿರ್ಮಾಣ ಆಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದಾಗ ನಿರ್ದೇಶಕರಿಂದ ಸಕರಾತ್ಮಕ ಸ್ಪಂದನ ಸಿಕ್ಕಿದೆ. ನಮಗೆ ಚಲನಚಿತ್ರದ ಬಗ್ಗೆ ಗಂಧಗಾಳಿಯೂ ಇಲ್ಲ, ಹೇಳಿಸಿದ ಕೆಲಸವೂ ಅಲ್ಲ. ಹೀಗೆ ಆಗಬೇಕು ಅಂಥ ಹೇಳಬಹುದು ಅಷ್ಟೇ ಎಂದರು.

ಶ್ರೀ ವಾದಿರಾಜ ಗುರು ಸಾರ್ವಭೌಮರು 15, 16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ. 120 ವರ್ಷ ಜೀವಿಸಿದ್ದು, ಬಹುಮುಖ ವ್ಯಕ್ತಿತ್ವದ ಜತೆಗೆ ಸಂದೇಶ ನೀಡಿದ್ದಾರೆ. ಅನೇಕ ಭಾಷೆಗಳ ಪಾಂಡಿತ್ಯ, 120 ವರ್ಷದ ಬದುಕಿನ ಪಯಣದಲ್ಲಿ 113 ವರ್ಷ ಸನ್ಯಾಸ ಜೀವನ ನಡೆಸಿದ ಏಕೈಕ ವ್ಯಕ್ತಿ. ಇಂಥ ಗುರುಸಾರ್ವಭೌಮರ ವ್ಯಕ್ತಿ ಚಿತ್ರಣ ಎರಡು-ಮೂರು ಗಂಟೆ ಅವಧಿಯಲ್ಲಿ ಕಟ್ಟಿಕೊಡುವುದು ಕಷ್ಟಕರ. ಈ ಹಿಂದೆ ಅನೇಕರು ಬಂದು ವಾದಿರಾಜರ ಧಾರಾವಾಹಿ, ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ವಾದಿರಾಜರ ವ್ಯಕ್ತಿತ್ವ ಕಟ್ಟಿಕೊಡಬೇಕಿದ್ದರೆ ಅಚ್ಚುಕಟ್ಟಾಗಿ ಮಾಡಬೇಕು. ಅನೇಕ ಕಾರಣಿಕ, ಧಾರ್ಮಿಕ ಪುರುಷರ ಸಿನಿಮಾಗಳು ಅಪಾರ್ಥ ಬರುವಂತೆ ಕಟ್ಟಿಕೊಟ್ಟಿದ್ದು, ವಾದಿರಾಜರ ವಿಷಯದಲ್ಲಿ ಅಂಥ ಅನ್ಯಾಯ ಆಗಬಾರದು. ಒಳ್ಳೆಯ ಚಿತ್ರವಾಗಿ, ಜನರಿಗೆ ಸಂದೇಶ ಕೊಡುವ ಹಾಗೂ ಅವರ ಸಂದೇಶ ಪ್ರಪಂಚಕ್ಕೆ ತಿಳಿಸುವ ಕೆಲಸ ಚಲನಚಿತ್ರದಿಂದ ಆಗಬೇಕು ಎಂದು ತಿಳಿಸಿದರು.

ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ, ಸಾಹಿತ್ಯ ಬರೆದಿರುವ ವಿಕ್ರಮ ಹತ್ವಾರ್ ಸಿನಿಮಾ ನಿರ್ಮಾಣ ಹಿನ್ನೆಲೆಯಲ್ಲಿ ಮಠದ ಪ್ರತಿನಿಧಿ ಕಾರ್ಯನಿರ್ವಹಿಸುತ್ತಾರೆ. ಸಿನಿಮಾ ಹಿಂದೆ ನಿಂತು ಕೆಲಸ ಮಾಡಲಿದ್ದಾರೆ. ಒಂದು ವರ್ಷ ಅವಧಿಯಲ್ಲಿ ಚಿತ್ರ ಹೊರಬರುವ ಆಶಾಭಾವನೆ ಇದೆ ಎಂದರು.
ನಿರ್ಮಾಪಕ ಪವನ್ ಸೀಮಿಕೆರೆ, ಸೋದೆ ಮಠದ ಪ್ರತಿನಿಧಿ ವಿಕ್ರಮ್ ಹತ್ವಾರ್, ಸಚಿನ್ ದೇಸಾಯಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಸಿದ್ಧ ನಟ ಪಾತ್ರಧಾರಿ:
ಎಲ್ಲರಿಗೂ ಒಪ್ಪಿಗೆಯಾಗುವಂಥ ರೀತಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ವಾದಿರಾಜರ ಚಿತ್ರ ಹೊರತರಲಾಗುತ್ತಿದ್ದು, ಮುಂದಿನ ವಾದಿರಾಜರ ಜಯಂತಿ ದಿನ ತೆರೆಗೆ ತರಲು ಯತ್ನಿಸಲಾಗುವುದು ಎಂದು ಚಿತ್ರ ನಿರ್ದೇಶಕ ಹಯವದನ ತಿಳಿಸಿದರು.
ವಾದರಾಜ ಶ್ರೀ ಜನನ, ಬಾಲ್ಯ ಲೀಲೆ, ಸನ್ಯಾಸ, ಪವಾಡ, ಮಹಿಮೆ, ಸಮಾಜಮುಖಿ ಕಾರ್ಯ, ಸಮಾಜಕ್ಕೆ ಕೊಡುಗೆ, ಸಾಹಿತ್ಯದ ಮೂಲಕ ಕನ್ನಡಕ್ಕೆ ಕೊಟ್ಟ ಕೊಡುಗೆಗಳನ್ನು ಇಟ್ಟುಕೊಂಡು ಸಿನಿಮಾ ತಯಾರಾಗಲಿದೆ. ಅವರ ಬಾಲ್ಯ, ಸನ್ಯಾಸ ಸ್ವೀಕಾರಕ್ಕೆ ಅದ್ಭುತ ಹಿನ್ನೆಲೆಯಿದ್ದು, ಜನಪದ ಶೈಲಿಯಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತದೆ. ಕನ್ನಡದ ಪ್ರಸಿದ್ಧ ನಟ ವಾದಿರಾಜರ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ವಾದಿರಾಜರು ಹೋದ ಕಡೆಗಳಲ್ಲಿ ಗ್ರೀನ್ ಮ್ಯಾಟ್, ಸಿಜಿ ಎಕ್ಟಟೆಂಶನ್, ಸೆಟ್ ಮೂಲಕ ಅಂದಿನ ಕಾಲದ ಪರಿಕಲ್ಪನೆಯಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎಂದರು.

Comments are closed.