ಕರಾವಳಿ

‘ಜಲಸಿರಿ’ ಯೋಜನೆ ಬಗ್ಗೆ ಸಮರ್ಪಕ ತನಿಖೆಗೆ ಒತ್ತಾಯಿಸಿದ ಕುಂದಾಪುರ ಪುರಸಭಾ ಸದಸ್ಯರು‌ | ಶಾಸಕ ಹಾಲಾಡಿ ಉಪಸ್ಥಿತಿಯಲ್ಲಿ ಸಭೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿ, ಜಲಸಿರಿ ಕುಡಿಯುವ ನೀರಿನ ಯೋಜನೆ ಹಾಗೂ ಶಾಸ್ತ್ರೀ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಶಾಸ್ತ್ರಿ ಪ್ರತಿಮೆ ಹಾಗೂ ಸರ್ಕಲ್ ಲೋಕಾರ್ಪಣೆ ವಿಚಾರದಲ್ಲಿ ವಿಶೇಷ ಸಭೆಯು ಶನಿವಾರ ಕುಂದಾಪುರ ಪುರಸಭೆಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜರುಗಿತು.

ಯುಜಿಡಿ, ಜಲಸಿರಿ ಕಾಮಗಾರಿ ಅವ್ಯವಸ್ಥೆ ಕೂಪವಾಗಿದೆ. ಪ್ರತಿಸಭೆಯಲ್ಲಿ ಈ ಬಗ್ಗೆ ಹೇಳಿ ಸಾಕಾಗಿಹೋಗಿದೆ ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಮೋಹನದಾಸ ಶೆಣೈ ಹೇಳಿದ್ದು ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ, ಯುಜಿಡಿ ಹಾಗೂ ಜಲಸಿರಿ ಯೋಜನೆ ಕುಂದಾಪುರ ಪುರಸಭೆ ವ್ಯಾಪ್ತಿ ಮಟ್ಟಿಗೆ ಎರಡು ಬಿಳಿ ಆನೆ ಸಾಕಿದಂತಾಗುತ್ತಿದೆ ಎಂದರು. ಕಾಮಗಾರಿ ಅಸಮರ್ಪಕತೆ ಬಗ್ಗೆ ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಅಶ್ವಿನಿ ಪ್ರದೀಪ್, ದೇವಕಿ ಸಣ್ಣಯ್ಯ ಹಾಗೂ ಶ್ರೀಧರ್ ಶೇರುಗಾರ್ ಮಾತನಾಡಿದರು.

ಜಲಸಿರಿ ಯೋಜನೆ ಅವ್ಯವಸ್ಥೆ..
ಕುಡಿಯುವ ನೀರಿನ ಸಲುವಾಗಿ ಆಂಭಿಸಲಾದ ಜಲಸಿರಿ ಯೋಜನೆಯಿಂದ ಪುರಸಭೆಗೆ ಲಾಭವಾಗುವ ಬದಲು ನಷ್ಟ ಹೆಚ್ಚಿದೆ. ಲಾಭವಾಗುವ ಮಾಹಿತಿ ನೀಡಿದ ಅಧಿಕಾರಿಗಳು ಇದೀಗಾ ಸಬೂಬು ಹೇಳುತ್ತಿದ್ದಾರೆ ಎಂದು ಹಿರಿಯ ಸದಸ್ಯ ಮೋಹನದಾಸ ಶೆಣೈ ಹೇಳಿದ್ದು ಈ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಸಕರು ಸೂಚಿಸಿದಂತೆ ಅವರು ಮಾಹಿತಿ ನೀಡಿದ್ದು ಹಲವು ಲೋಪದೋಷಗಳನ್ನು ಶಾಸಕರು ಆಕ್ಷೇಪಿಸಿದರು. 2014 ಹಾಗೂ 2020 ರಲ್ಲಿ ನಡೆದ ಚರ್ಚೆ, ಒಪ್ಪಂದ ಮೊದಲಾದವುಗಳಲ್ಲಿ ಯೋಜನೆಯ ನಿರ್ವಹಣೆ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲದ ಬಗ್ಗೆ ಶಾಸಕರು ಅಸಮಾಧಾನ ಹೊರಹಾಕಿದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ರಾಜಾಡಳಿತವಲ್ಲ. ಯಾರ ಸ್ವಥ ಆಸ್ತಿಯಲ್ಲ. ಒಪ್ಪಂದ ಕರಾರು ಸಮರ್ಪಕವಾಗಿಲ್ಲ, ಸಭೆಯಲ್ಲಿ ಚರ್ಚೆಯಾಗಿ ನಿರ್ಣಯವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಯಾವ ಆಧಾರದಲ್ಲಿ ದರ ನಿಗದಿಯಾಗಿದೆ, ಹಾಗೂ ಅವೈಜ್ಞಾನಿಕ ರೀತಿಯಲ್ಲಿ ನಡೆದ ಈ ಪ್ರಕ್ರಿಯೆ ಬಗ್ಗೆ ಸಂಬಂದಪಟ್ಟವರಿಗೆ ನೋಟಿಸ್ ನೀಡಿ ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಕುರಿತು ವಿಪಕ್ಷ ನಾಯಕ ಚಂದ್ರಶೇಖರ್ ಖಾರ್ವಿ ಪ್ರತಿಕ್ರಿಯಿಸಿ ಈ ಬಗ್ಗೆ ತನಿಖಾಧಿಕಾರಿಯನ್ನು ನೇಮಿಸಿ ಸೂಕ್ತ ತನಿಖೆ ನಡೆಸಿ ಅಕ್ರಮವಾಗಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದಿದ್ದು ಇಡೀ ಸಭೆ ಇದಕ್ಕೆ ಒಮ್ಮತ ಸೂಚಿಸಿತು.

ಯುಜಿಡಿ ಕಾಮಗಾರಿ ಎಸ್.ಟಿ.ಪಿ ತಕರಾರು:
ಈ ಕಾಮಗಾರಿಯ ಎಸ್.ಟಿ.ಪಿ ನಿರ್ಮಾಣಕ್ಕಾಗಿ ಹುಂಚಾರುಬೆಟ್ಟು ಎಂಬಲ್ಲಿ ಕೆಲ ವರ್ಷದ ಹಿಂದೆ ಜಾಗ ಗುರುತಿಸಿದ್ದು ಸ್ಥಳೀಯರ ವಿರೋಧ ಬಂದಿದ್ದು ಅದಕ್ಕಾಗಿ ಬೇರೆ ಜಾಗ ಗುರುತಿಸಲಾಗಿದೆ. ಜಾಗ ಬದಲಿಸಿ ಕಾಮಗಾರಿ ಮಾಡಬೇಕು ಎಂದು ಆ ಭಾಗದ ವಾರ್ಡ್ ಸದಸ್ಯ ಶೇಖರ್ ಪೂಜಾರಿ ತಿಳಿಸಿದರು. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಮಾಹಿತಿ ನೀಡಿ, 2-3 ವರ್ಷದ ಹಿಂದೆ ಈ ಜಾಗದಲ್ಲಿ ಎಸ್.ಟಿ.ಪಿ ನಿರ್ಮಾಣದ ಬಗ್ಗೆ ಭೂಸ್ವಾಧೀನ, ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಪರವಾನಿಗೆ ಪಡೆದಿದ್ದು ಇದೀಗಾ ಬೇರೆ ಜಾಗದಲ್ಲಿ ಕಾಮಗಾರಿ ಮಾಡಬೇಕಾದರೆ ಅಷ್ಟೂ ತಾಂತ್ರಿಕ ಪ್ರಕ್ರಿಯೆ ಅನುಸರಿಸಬೇಕಿದ್ದು ಅದಕ್ಕಾಗಿ ಮತ್ತೆ ಒಂದೆರಡು ವರ್ಷ ಕಾಯಬೇಕಾಗುತ್ತದೆ. ಇದರಿಂದಾಗಿ ಕಾಮಗಾರಿ ಮಾಡಲು ಮತ್ತೆ ವಿಳಂಭವಾಗುತ್ತದೆ ಎಂದರು. ಮೊದಲು ಸ್ಥಳ ಗುರುತಿಸುವಾಗ ಜನರನ್ನು ವಿಶ್ವಾಸಕ್ಕೆ ಪಡೆದಿಲ್ಲ, ಇದೀಗ ಜನರು ನಮ್ಮನ್ನು ದೂರುತ್ತಿದ್ದಾರೆ ಎಂದು ಶೇಖರ್ ಪೂಜಾರಿ ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿದ ಸದಸ್ಯ ಚಂದ್ರಶೇಖರ್ ಖಾರ್ವಿ ಕುಂದಾಪುರ ಬೆಳೆಯುತ್ತಿರುವ ನಗರವಾಗಿದೆ. ಇಲ್ಲಿನ ಹಲವು ಕಡೆಗಳ ತ್ಯಾಜ್ಯ ಖಾರ್ವಿಕೇರಿಗೆ ಬಂದು ವರ್ಷಾನುವರ್ಷದಿಂದ ಸಮಸ್ಯೆ ಅನುಭವಿಸುತ್ತಿದ್ದು ಯುಜಿಡಿ ಕಾಮಗಾರಿ ಕ್ಷಿಪ್ರಗತಿಯಲ್ಲಿ ಮುಗಿಯುವುದು ಅಗತ್ಯ. ಯಾವುದೇ ಕಾಮಗಾರಿ ನಡೆಯುವಾಗ ಅಡ್ಡಿ ಆತಂಕಗಳು ಸಹಜ. ಇದನ್ನು ಸಮರ್ಪಕವಾಗಿ ನಿಬಾಯಿಸಿ ಕಾಮಗಾರಿ ನಡೆಸಲು ಶಾಸಕರು ಕೂಡ ಪ್ರಯತ್ನಿಸಬೇಕು. ಎಸ್.ಟಿ.ಪಿ ರಚನೆಗೆ ಬೇರೆ ಜಾಗ ಆಯ್ಕೆ ಮಾಡಿದರೆ ಪ್ರಕ್ರಿಯೆ ಮುಗಿಯಲು ವಿಳಂಭವಾಗಿ ಕಾಮಗಾರಿ ಹಳ್ಳಹತ್ತುತ್ತದೆ ಎಂದರು.

ಶಾಸಕರ ಪ್ರತಿಕ್ರಿಯೆ:
ವೈಜ್ಞಾನಿಕ ಮಾದರಿಯಲ್ಲಿ ಕಾಮಗಾರಿ ಮಾಡಿದಲ್ಲಿ ಯಾವುದೇ ಸಮಸ್ಯೆ ಇಲ್ಲ ಅನ್ನುವುದು ಅಧಿಕಾರಿಗಳು ಹೇಳುವ ಮಾತುಗಳು. ಆದರೆ ಅವರು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಿಲ್ಲ ಎನ್ನುವ ಭೀತಿ ಸ್ಥಳೀಯ ಜನರಲ್ಲಿರುವುದರಿಂದ ಅವರು ಕಾಮಗಾರಿ ಬಗ್ಗೆ ಆಕ್ಷೇಪ ಮಾಡುತ್ತಿದ್ದಾರೆ. ಎಸ್.ಟಿ.ಪಿ ವಿಚಾರದಲ್ಲಿ ವಿಜ್ಞಾನ ಮುಂದುವರಿದಿದ್ದು ಗುತ್ತಿಗೆದಾರರು ಅದನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದರು.

ಶಾಸ್ತ್ರೀ ವೃತ್ತದಲ್ಲಿ ಸರ್ಕಲ್ ನಿರ್ಮಾಣ ಹಾಗೂ ಶಾಸ್ತ್ರಿಯವರ ಪ್ರತಿಮೆ ಅನಾವರಣಕ್ಕೆ ದಿನ ನಿಗದಿ ವಿಚಾರದಲ್ಲಿ ಕೆಲ ಕಾಲ ಚರ್ಚೆ ನಡೆದಿದ್ದು ಕಾಮಗಾರಿ ಅತೀ ಶೀಘ್ರ ಮುಗಿಸಿ ಚುನಾವಣಾ ನೀತಿ ಸಂಹಿತೆಯೊಳಗೆ ಲೋಕಾರ್ಪಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಇನ್ನು ನಗರೋತ್ಥಾನ ಅನುದಾನದ ವಿಷಯದಲ್ಲಿ ಅಸಮಾಧಾನದ ಮಾತುಗಳು ಕೇಳಿಬಂದು ಒಂದಷ್ಟು ಹೊತ್ತು ಚರ್ಚೆ ನಡೆಯಿತು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಮಂಜುನಾಥ ಆರ್. ಇದ್ದರು.

ಕುಂದಾಪುರದಲ್ಲಿ ಯುಜಿಡಿ ಗುಣಮಟ್ಟದ ಕಾಮಗಾರಿ ನಡೆದಿಲ್ಲ..!
ಯುಜಿಡಿ ಕಾಮಗಾರಿ ವಿಚಾರದ ಬಗ್ಗೆ ಹಲವು ದೂರುಗಳು ಬಂದಿದೆ. ಬೇರೆಬೇರೆ ನಗರಗಳಿಗೆ ಹೋಲಿಸಿದರೆ ಕುಂದಾಪುರದಲ್ಲಿ ನಡೆದ ಯುಜಿಡಿ ಕಾಮಗಾರಿ ಗುಣಮಟ್ಟದ ಬಗ್ಗೆ ಪ್ರಶ್ನೆಯೆದ್ದಿದ್ದು ಈ ಬಗ್ಗೆ ವಿಮರ್ಷೆಯಾಗಬೇಕು. ಕಾಂಕ್ರಿಟ್ ರಸ್ತೆ ಕಟ್ ಮಾಡಿದ ಮೇಲೆ ಸಮರ್ಪಕವಾಗಿ ರಿಪೇರಿ ಮಾಡಿಲ್ಲ. ಹಲವೆಡೆ ಅಪಾಯಕಾರಿ ಸ್ಥಿತಿಯಿದೆ. ಈ ಬಗ್ಗೆ ಗುತ್ತಿಗೆದಾರರು ಹಾಗೂ ಇಂಜಿನಿಯರ್ ವಿಭಾಗದ ನಿರ್ಲಕ್ಷ್ಯ ಕಾಣಿಸುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಕೆಲ ರಸ್ತೆ ಮಂಜೂರಾಗಿದ್ದು ಆ ಭಾಗದಲ್ಲಿ ಯುಜಿಡಿ ಕಾಮಗಾರಿ ಅಂತ್ಯಗೊಳಿಸಿದಲ್ಲಿ ಮತ್ತೆ ಹೊಸ ರಸ್ತೆ ಕತ್ತರಿಸುವ ಪ್ರಮೇಯ ಇರುವುದಿಲ್ಲ. ಅಧಿಕಾರಿಗಳು ಇಚ್ಚಾಶಕ್ತಿ ಕೆಲಸ ಮಾಡಿ ಜನರ ಸಮಸ್ಯೆ ಬಗೆಹರಿಸಿ.
ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ ಶಾಸಕ)

 

 

Comments are closed.