ಕುಂದಾಪುರ: ಪುರಸಭಾ ವ್ಯಾಪ್ತಿಯ ನಗರದ ಎಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಿಂಗ್ ರೋಡ್ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.

ಕಾಮಗಾರಿ ನಡೆಯಲಿರುವ ಪ್ರದೇಶದಲ್ಲಿ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಕುಂದಾಪುರ ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನವಿಯಂತೆ ಮಂಜೂರಾದ 19.8 ಕೋ. ರೂ. ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಆಗಿದೆ. ಕುಂದಾಪುರ ನಗರವನ್ನು ಸುತ್ತುವರಿದಿರುವ ಮಹತ್ವಾಕಾಂಕ್ಷೆಯ ರಿಂಗ್ ರೋಡ್ ನಾಗರಿಕರ ಹಲವು ವರ್ಷಗಳ ಬಯಕೆಯಾಗಿತ್ತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ದೂರದೃಷ್ಟಿತ್ವದಲ್ಲಿ ಸಾಕಾರಗೊಂಡಿದ್ದು ರಿಂಗ್ ರೋಡ್ ನಿರ್ಮಾಣವಾದರೆ ನಗರದ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ನಗರದೊಳಗೆ ಪ್ರವೇಶ ಪಡೆಯದೆ ಕೋಡಿ ಮೊದಲಾದ ಭಾಗಗಳಿಗೆ, ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಹೆದ್ದಾರಿಯಿಂದ ರಿಂಗ್ ರೋಡ್ ಮೂಲಕ ಹೋಗಲು ಸಾಧ್ಯವಿದೆ. ಆದ್ದರಿಂದ ರಿಂಗ್ ರೋಡ್ ನಿರ್ಮಾಣದ ಅವಶ್ಯವನ್ನು ಶಾಸಕರು ಅಂದೇ ಮನಗಂಡಿದ್ದು ಇಂದು ಅವರ ಕನಸು ಸಾಕಾರಗೊಂಡಿದೆ. ಆರಂಭದಲ್ಲಿ ರಿಂಗ್ ರಸ್ತೆ ಕಾಮಗಾರಿ ಪ್ರಭಾಕರ ಸಾಮಿಲ್ ವರೆಗೆ ನಡೆಯಲಿದ್ದು, ಅಲ್ಲಿಂದ ಮುಂದುವರಿದ ಕಾಮಗಾರಿಗೆ ೨೦ ಕೋಟಿ ಅಂದಾಜು ಪಟ್ಟಿ ಸಿದ್ದಪಡಿಸಿ ಕೊಡಲಾಗಿದೆ. ಅನುದಾನದ ನಂತರ ರಿಂಗ್ ರಸ್ತೆ ಕೋಡಿ ಸೇತುವೆ ತನಕ ನಿರ್ಮಾಣ ಮಾಡಲಾಗುತ್ತದೆ. ರಿಂಗ್ ರಸ್ತೆ ಎಡಬದಿಯಲ್ಲಿ ಫುಟ್‌ಪಾತ್ ನಿರ್ಮಾಣ, ನದಿ ದಂಡೆ ಕಟ್ಟುವ ಜೊತೆ ಡಬ್ಬಲ್ ರಸ್ತೆಯಾಗಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ದೇವಾಡಿಗ, ಮಾಜಿ ಅಧ್ಯಕ್ಷೆ ವಸಂತಿ ಸಾರಂಗ, ಪುರಸಭೆ ಸದಸ್ಯರಾದ ಮೋಹನದಾಸ ಶೆಣೈ, ವನಿತಾ, ಪ್ರಭಾಕರ ವಿ., ಸಂತೋಷ ಕುಮಾರ್ ಶೆಟ್ಟಿ, ರೋಹಿಣಿ ಉದಯ ಕುಮಾರ್, ಶ್ವೇತ ಸಂತೋಷ್, ಶೇಖರ ಪೂಜಾರಿ, ನಾಮನಿರ್ದೇಶಿತ ಸದಸ್ಯರಾದ ಪುಷ್ಪಾ ಶೇಟ್, ಪ್ರಕಾಶ್ ಖಾರ್ವಿ, ಕಾಂಗ್ರೆಸ್ ಸದಸ್ಯರಾದ ಚಂದ್ರಶೇಖರ ಖಾರ್ವಿ, ದೇವಕಿ ಪಿ.ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಜಯಾನಂದ ಖಾರ್ವಿಇದ್ದರು.
ಪುರಸಭೆ ಹಿರಿಯ ಸದಸ್ಯೆ ಅಸಮಧಾನ
ರಿಂಗ್ ರಸ್ತೆ ನಿರ್ಮಾಣ ಗುದ್ದಲಿ ಪೂಜೆಗೆ ೧೦.೩೦ಕ್ಕೆ ಸಮಯ ನಿಗದಿ ಆಗಿತ್ತು. ಅಧ್ಯಕ್ಷೆ, ಉಪಾಧ್ಯಕ್ಷರು ಸದಸ್ಯರು ಕೂಡಾ ಹಾಜರಿದ್ದರು. ಗುದ್ದಲಿ ಪೂಜೆ ಧಾರ್ಮಿಕ ಕಾರ್ಯಕ್ರಮ ಸಮಯಕ್ಕೆ ಆರಂಭವಾಗಿತ್ತು. ಸ್ವಲ್ಪ ತಡವಾಗಿ ಬಂದ ಕಾಂಗ್ರೆಸ್ ಸದಸ್ಯೆ ದೇವಕಿ ಪಿ.ಸಣ್ಣಯ್ಯ ತಾನು ಬರುವದಕ್ಕಿಂತ ಮುನ್ನಾ ಗುದ್ದಲಿ ಪೂಜೆ ನೆರವೇರಿಸಿದ್ದಕ್ಕೆ ಅಸಮಧಾನ ಹೊರಹಾಕಿದರು. ಗುದ್ದಲಿ ಪೂಜೆಗೆ 10.30ಕ್ಕೆ ಸಮಯ ಕೊಟ್ಟಿದ್ದು ಐದು ನಿಮಿಷ ಕಾಯುವ ವ್ಯವದಾನವೂ ಇಲ್ಲದ ಮೇಲೆ ನಮ್ಮನ್ನು ಏಕೆ ಕರೆಯಬೇಕಿತ್ತು ಎಂದು ಅಸಮಧಾನ ಹೊರಹಾಕಿದರು.
Comments are closed.