ಕರಾವಳಿ

ಹೊಸ ವರ್ಷಾಚರಣೆಯ ನೆಪದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರೆ ನಿರ್ದಾಕ್ಷಿಣ್ಯ ಕ್ರಮ: ಉಡುಪಿ ಎಸ್ಪಿ ಅಕ್ಷಯ್ ಎಂ. ಹಾಕೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಹೊಸ ವರ್ಷಾಚರಣೆ ಸಂಬಂಧ ಪೊಲೀಸ್ ಇಲಾಖೆ ನೀಡಿರುವ ಸಮಯದ ಮಿತಿ, ಎಲ್ಲಾ ಸೂಚನೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕಾರ್ಯಕ್ರಮಮಗಳ ಸಂಘಟಕರು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ. ಹಾಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹೊಸ ವರ್ಷಾಚರಣೆ ಸಂದರ್ಭ ಕೋವಿಡ್ 19ಗೆ ಸಂಬಂಧಪಟ್ಟಂತೆ ನೀಡಲಾದ ಸೂಚನೆಗಳನ್ನು ಪಾಲಿಸಬೇಕು. ಎಲ್ಲಾ ರೀತಿಯ ಆಚರಣೆಗಳು 2023 ಜ.1 ರಂದು ರಾತ್ರಿ 1 ಗಂಟೆಯ ಒಳಗಾಗಿ ಮುಕ್ತಾಯಗೊಳ್ಳಬೇಕು.
ಒಳಾಂಗಣದಲ್ಲಿ ನಡೆಯುವ ಸಮಾರಂಭ, ಪಬ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮೊದಲಾದ ಕಡೆಗಳಲ್ಲಿ ಅದರ ಸಾಮರ್ಥ್ಯಕ್ಕೂ ಮೀರಿ ಜನ ಸೇರದಂತೆ ನೋಡಿಕೊಳ್ಳಬೇಕು ಹಾಗೂ ಅಲ್ಲಿ ವಿದ್ಯುತ್ ಅಥವಾ ಅಗ್ನಿ ಅವಘಡಗಳು ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಹೋಟೆಲ್, ಪಬ್, ರೆಸ್ಟಾರೆಂಟ್, ಹೋಮ್ ಸ್ಟೇ, ಪಿಜಿಗಳಲ್ಲಿ ಸಾರ್ವಜರಿಗೆ ಈವೆಂಟ್‌ಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಕಾರ್ಯಕ್ರಮಗಳ ಆಯೋಜಕರು ಭದ್ರತೆ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಸ್ವಯಂಸೇವಕರು, ಪುರುಷ ಮತ್ತು ಮಹಿಳಾ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು.

ವಾಹನ ಪಾರ್ಕಿಂಗ್ ಸಲುವಾಗಿ ಪ್ರತ್ಯೇಕ ವ್ಯವಸ್ಥೆ, ಇತರೇ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡತಡೆಯಾಗದೇ ಸುಗಮ ಸಂಚಾರಕ್ಕೆ ಮುಂಗಡವಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ವಾಹನ ಅಪಘಾತಗಳಗದಂತೆ ಮುಂಜಾಗ್ರತ ಕ್ರಮ ವಹಿಸಬೇಕು.

ಬಸ್ ಸ್ಟ್ಯಾಂಡ್ ಬೀಚ್, ರಸ್ತೆ, ಫುಟ್ ಪಾತ್, ಉದ್ಯಾನವನದಲ್ಲಿ ಮತ್ತು ಇತರೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆಯ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಮಲು ಅಥವಾ ಮದ್ಯದ ನಷೆಯಲ್ಲಿ ಆಚರಣೆ ಮಾಡುವವರು ಹಾಗೂ ಹೊಸ ವರ್ಷಾಚರಣೆಯ ನೆಪದಲ್ಲಿ ಜನರೊಂದಿಗೆ ಮಹಿಳೆಯರೊಂದಿಗೆ ಅನುಚಿತ ವರ್ತನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಲಾಗುವುದು. ರಾತ್ರಿ ಹೊತ್ತು ಕುಡಿದು ವಾಹನ ಚಾಲನೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ವಾಹನ ಚಾಲನೆ ನಡೆಸುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ಲೌಡ್ ಸ್ಪೀಕರ್ ಗಳನ್ನು ಸರ್ವೋಚ್ಚ ನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳನ್ನು ಉಲ್ಲಂಘನೆಯಾಗದಂತೆ ಮತ್ತು ಶಬ್ದ ಮಾಲಿನ್ಯ ಆಗದಂತ ಧ್ವನಿವರ್ಧಕದ ಡೆಸಿಬಲ್‌ ಮಿತಿಯಲ್ಲಿ ಇಟ್ಟು ಆಚರಣೆ ನಡೆಸಬೇಕು. ಅಕ್ಕಪಕ್ಕದ ಜನರಿಗೆ ತೊಂದರೆಯಾಗದಂತೆ, ಆಸ್ಪತ್ರೆ ಹಾಗೂ ಅಪಾರ್ಟ್ ಮೆಂಟ್‌ಗಳಲ್ಲಿ ವಾಸಿಸುವ ಹಿರಿಯ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕುಎಂದು ಅವರು ತಿಳಿಸಿದ್ದಾರೆ.

Comments are closed.