ಕರಾವಳಿ

ಬ್ರಹ್ಮಾವರ ಪೊಲೀಸರಿಂದ ಕುಖ್ಯಾತ ಮನೆ ಕಳವು ಪ್ರಕರಣದ ಆರೋಪಿ ಬಂಧನ ; 7 ಲಕ್ಷ ಮೌಲ್ಯದ ಚಿನ್ನಾಭರಣ, ಸೊತ್ತು ವಶ

Pinterest LinkedIn Tumblr

ಉಡುಪಿ: ಬ್ರಹ್ಮಾವರ ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಕಳವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ ರಚಿಸಿದ ಪೊಲಿಸರ ವಿಶೇಷ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕಾಡೂರು ಗ್ರಾಮದ ತಂತ್ರಾಡಿ ಬಾಯರಬೆಟ್ಟು ನಿವಾಸಿ ವಿಜಯ ಕುಮಾರ್‌ ಶೆಟ್ಟಿ (28) ಬಂಧಿತ ಆರೋಪಿ. ಈತ ಬ್ರಹ್ಮಾವರ ಠಾಣೆಯ ಕಳ್ಳತನ ಪ್ರಕರಣದ ಹಳೆಯ ಆರೋಪಿಯಾಗಿದ್ದು ನೀಲಾವರ ಕ್ರಾಸ್‌ ಬಳಿ ಬಂಧಿಸಲಾಗಿದೆ. ಈತನ ಬಂಧನದಿಂದ ಬ್ರಹ್ಮಾವರ ಪೊಲೀಸ್‌ ಠಾಣೆ ವ್ಯಾಪ್ತಿಯ 4 , ಕೋಟಾ ಪೊಲೀಸ್‌ ಠಾಣೆ ವ್ಯಾಪ್ತಿಯ 1 ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ವಿಜಯ ಕುಮಾರ ಶೆಟ್ಟಿಯಿಂದ 30 ಸಾವಿರ ಮೌಲ್ಯದ ಹೋಂಡಾ ಮ್ಯಾಟ್ರಿಕ್ಸ್‌ ಸ್ಕೂಟರ್‌, ಕಳವು ಮಾಡಿದ 4 ಲಕ್ಷ 64 ಸಾವಿರದ 700 ರೂ. ಮೌಲ್ಯದ ಚಿನ್ನಾಭರಣಗಳು, 2080 ರೂ. ಮೌಲ್ಯದ ಬೆಳ್ಳಿ ನಾಣ್ಯಗಳು, 9,000 ಮೌಲ್ಯದ ಒಂದು ಸೀರೆ, ಕಳವು ಮಾಡಿದ ಕಾಳುಮಣಸಿನ ಮಾರಾಟದಿಂದ ಪಡೆದ 84 ಸಾವಿರ ನಗದು, 2,800 ರೂ. ಮೌಲ್ಯದ ಕಳವು ಮಾಡಿದ ಗ್ಯಾಸ್‌ ಸಿಲಿಂಡರ್‌ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು ಹಾಗೂ ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನದ ಮೇಲೆ ನಿಗಾವಹಿಸಿದ್ದು ಡಿ.19ರಂದು ಸಂಜೆ ವಿಜಯ್ ಹೋಗುತ್ತಿದ್ದ ಹೊಂಡಾ ಮ್ಯಾಟ್ರಿಕ್ಸ್‌ ಸ್ಕೂಟರ್‌ ರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಳ್ಳತನಕ್ಕೆ ಬೇಕಾದ ಸಲಕರಣೆಗಳು ಆತನಲ್ಲಿದ್ದು ತಕ್ಷಣ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ಕುಕೃತ್ಯಗಳ ಮಾಹಿತಿ ನೀಡಿದ್ದ.

ಹಲವು ಕಡೆ ಕಳವು..!
2022ರ ಮಾರ್ಚ್‌ ಮತ್ತು ಎಪ್ರಿಲ್ ತಿಂಗಳ ಮಧ್ಯಾವಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್‌ ರವರ ಮನೆಗೆ ಕನ್ನ ಹಾಕಿ 280 ಕೆಜಿ ತೂಕದ 1 ಲಕ್ಷ 40 ಸಾವಿರ ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕಳವು ಮಾಡಿದ್ದ.
2022ರ ಜುಲೈನಲ್ಲಿ ನಡೂರು ಪಟೇಲ್‌ ಶ್ರೀ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಒಂದು ಇಂಡೇನ್‌ ಕಂಪೆನಿಯ ಗ್ಯಾಸ್‌ ಸಿಲಿಂಡರ್‌ ಕಳವು ಮಾಡಿದ್ದ. ಯಡ್ತಾಡಿ ಗ್ರಾಮದ ದಾಲಾಡಿಯಲ್ಲಿರುವ ವಾಣಿ ಭಂಡಾರಿ ಎನ್ನುವರ ಮನೆಗೆ ನುಗ್ಗಿ 5 ಲಕ್ಷ ಮೌಲ್ಯದ ಚಿನ್ನಾಭರಣ, 15 ಸಾವಿರ ನಗದು ಕಳವು ಮಾಡಿದ್ದ.
2022ನೇ ನವೆಂವರ್ ತಿಂಗಳಿನಲ್ಲಿ ಕೋಟ ಠಾಣಾ ವ್ಯಾಪ್ತಿಯ ಬಿಲ್ಲಾಡಿ ಶಾಲೆಯ ಎದುರಿನ ಸುಜಾತ ಶೆಟ್ಟಿ ಎನ್ನುವರ ಮನೆ ಕಳ್ಳತನ. ಆರೂರು ಗ್ರಾಮದ ಮೇಲಡ್ಪು ಭಾಸ್ಕರ ಶೆಟ್ಟಿರವರ ಮನೆಯಲ್ಲಿ 31 ಸಾವಿರ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಮತ್ತು ಸೀರೆ ಹಾಗೂ 5 ಸಾವಿರ ನಗದು ಕಳವು ಮಾಡಿದ್ದ.

ನಟೋರಿಯಸ್ ಆರೋಪಿ..
ಆರೋಪಿ ವಿಜಯ ಕುಮಾರ್‌ ಶೆಟ್ಟಿ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ಬಂದರು ಪೊಲೀಸ್‌ ಠಾಣೆಯಲ್ಲಿ 4, ಎನ್‌.ಆರ್‌ ಪುರ, ಹರಿಹರ, ಶಿವಮೊಗ್ಗ, ಬ್ರಹ್ಮಾವರ, ಆಗುಂಬೆ ಪೊಲೀಸ್‌ ಠಾಣೆಯಲ್ಲಿ ತಲಾ‌ ಒಂದೊಂದು ಪ್ರಕರಣಗಳು, ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣಗಖು ದಾಖಲಾಗಿದೆ.ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಜಾಮೀನು ರಹಿತ ವಾರಂಟ್‌ ಜ್ಯಾರಿಯಾಗಿದೆ.

ಕಾರ್ಯಾಚರಣೆ ತಂಡ..
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ ಎಸ್ ನಾಯ್ಕ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತ ಪದ್ಮನಾಭ, ಬ್ರಹ್ಮಾವರ ಠಾಣೆ ಉಪನಿರೀಕ್ಷಕ ರಾಜಶೇಖರ ವಂದಲಿ, ಠಾಣಾ ತನಿಖೆ ಪಿಎಸ್‌ಐ ಮುಕ್ತಾಬಾಯಿ, ಕೋಟ ಠಾಣಾ ಪಿಎಸ್‌ಐ ಮಧು ಬಿ.ಇ, ಬ್ರಹ್ಮಾವರ ಠಾಣಾ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್‌, ಮಹಮದ್‌ ಅಜ್ಮಲ್‌, ರಾಘವೇಂದ್ರ ಕಾರ್ಕಡ, ಸುರೇಶ್‌ ಶೆಟ್ಟಿ, ಗಣೇಶ್‌ ದೇವಾಡಿಗ, ದಿಲೀಪ, ಸಂತೋಷ ರಾಥೋಡ್‌, ಸಂದೀಪ, ದೇವರಾಜ್, ಗುರು ಕಿರಣ, ಸುರೇಶ್‌ ಬಾಬು, ಅಂಬ್ರಯ್ಯ ಹೀರೆಮಠ, ನವೀನ ಯಾದವ್‌, ಕೋಟ ಠಾಣಾ ಸಿಬ್ಬಂದಿ ರಾಘವೇಂದ್ರ ಶೆಟ್ಟಿ, ಹಾಗೂ ಕಂಪ್ಯೂಟರ್‌ ಸಿಬ್ಬಂದಿ ಯೋಗೀಶ್‌ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ನಿತಿನ್‌, ದಿನೇಶ್‌, ಹಾಗೂ ಚಾಲಕ ಅಣ್ಣಪ್ಪ ಮತ್ತು ಸಂತೋಷ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಎಸ್ಪಿ ಅಕ್ಷಯ ಎಂ. ಹೆಚ್ ತಂಡವನ್ನು ಅಭಿನಂದಿಸಿದ್ದಾರೆ.

 

Comments are closed.