ಕರಾವಳಿ

ಉಡುಪಿ ಜಿಲ್ಲಾ ರೈತ ಸಂಘ ಹಾಲಾಡಿ ವಲಯದ ರೈತರ ಸಭೆ; ವಾರಾಹಿ ಯೋಜನೆ ಶೀಘ್ರ ಮುಗಿಸಲು ಜನರ ಹೋರಾಟ ಅಗತ್ಯ: ಕೆ. ಪ್ರತಾಪಚಂದ್ರ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ವಾರಾಹಿ ನೀರಾವರಿ ಯೋಜನೆ ಆರಂಭವಾಗಿ 43 ವರ್ಷ ಕಳೆದರೂ ಕೂಡ ಇದನ್ನು ಪೂರ್ಣಗೊಳಿಸಲಾಗದ ಪರಿಸ್ಥಿತಿಗೆ ಯಾರು ಕಾರಣ ಎಂಬುದನ್ನು ಪರಾಮರ್ಶೆ ಮಾಡಬೇಕಿದೆ. ನಾವು ಯಾವುದೇ ಸರ್ಕಾರಗಳ ಬಗ್ಗೆ ಠೀಕೆ ಮಾಡುವುದಿಲ್ಲ, ಎಲ್ಲಾ ಸರ್ಕಾರವೂ ಒಂದೆ. ಬದಲಾವಣೆಗಳು ಅಧಿಕಾರಿಗಳ ಮಟ್ಟದಲ್ಲಿ ಆಗಬೇಕಿತ್ತು. ಕೆಲಸ ಪೂರ್ತಿಗೊಳಿಸದ ಹಾಗೂ ಟೆಂಡರ್ ಪಡೆದು ಕಾಮಗಾರಿ‌ ಮಾಡದ ಗುತ್ತಿಗೆದಾರರ ಮೇಲೆ ‌ಕ್ರಮವಹಿಸದ ಅಧಿಕಾರಿಗಳ ಬೇಜವಬ್ದಾರಿತನದ ಬಗ್ಗೆ ಮುಲಾಜಿಲ್ಲದೆ ಮಾತನಾಡಬೇಕಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪಚಂದ್ರ ಶೆಟ್ಟಿ‌ ಹೇಳಿದ್ದಾರೆ.

ಭಾನುವಾರ ಸಂಜೆ ಬಿದ್ಕಲಕಟ್ಟೆ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ರೈತ ಸಂಘ ಹಾಲಾಡಿ ವಲಯದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ದೇಶಾದ್ಯಂತ ನೀರಿಗಾಗಿ ಅದೆಷ್ಟೋ ಹೋರಾಟಗಳು ನಡೆದ ಇತಿಹಾಸವಿದೆ. ಆದರೆ ವಾರಾಹಿ ವಿಚಾರದಲ್ಲಿ ಜನರ ಮೌನವೇ ಕಾಮಗಾರಿ ವಿಳಂಬಕ್ಕೆ ಕಾರಣ. ಸಮಸ್ಯೆ ಪರಿಹಾರಕ್ಕೆ ಹಳೆಮೈಸೂರು, ಉತ್ತರ ಕರ್ನಾಟಕದಂತೆ ಹೊರಾಟದ ರೂಪುರೇಷೆ ಸಿದ್ಧವಾಗಬೇಕು. ವಾರಾಹಿ ಸಮಸ್ಯೆಯ ಬಗ್ಗೆ ಸಂಸದರು, ಶಾಸಕರು, ಗುತ್ತಿಗೆದಾರರ ಬಳಿ ಕೇಳಲು ಜನರಿಗೆ ಮುಜುಗರವಾದರೆ ಅಧಿಕಾರಿಗಳ ಬಳಿ ದಾಕ್ಷಿಣ್ಯವಿಲ್ಲದೆ ಕೇಳಬೇಕು. ಪ್ರಶ್ನೆ ಮಾಡದಿದ್ದರೆ 43 ವರ್ಷವಲ್ಲ, ಇನ್ನಷ್ಟು ವರ್ಷವಾದರೂ ಕೆಲಸ ಮುಗಿಯುವುದಿಲ್ಲ. ರೈತ ಸಂಘ ಜನರ ಸಮಸ್ಯೆಗಳಿಗೆ ಸ್ಪಂದಿಸಬಹುದು, ಅವರೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಬಹುದು ಹೊರತು ನಮ್ಮದು ಮಂಜೂರು ಮಾಡಲು ಸರ್ಕಾರವಲ್ಲ. ಮೂಲ ಯೋಜನೆ ಪ್ರಾರಂಭವಾಗಿ ಇಷ್ಟು ವರ್ಷ ಕಳೆದಿದೆ. ವಾರಾಹಿ ಯೋಜನೆ ವಿಚಾರದಲ್ಲಿ ರೈತ ಸಂಘದ ಜವಬ್ದಾರಿ‌ ಮಾತ್ರ ಇರುವುದಲ್ಲ. ಬದಲಾಗಿ ಎಲ್ಲಾ ಜನರು ಇದಕ್ಕೆ ಧ್ವನಿಯಾಗಬೇಕು ಎಂದರು.

ಸಿದ್ದಾಪುರ ವಲಯ ಉಪಾಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ರಾಜರಾಮ ತಲ್ಲೂರು‌ ಅವರು ವಿದ್ಯುತ್ ಇಲಾಖೆ ಖಾಸಗೀಕರಣದಿಂದಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಹಾಲಾಡಿ ವಲಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಮರತ್ತೂರು ಮಾತನಾಡಿ, ಉಡುಪಿ ಜಿಲ್ಲಾ ರೈತಸಂಘವು ಪ್ರತಾಪಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಹಮ್ಮಿಕೊಂಡು‌ ರೈತರ ಹತ್ತಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಊರಿನಲ್ಲಿ ಹಸಿರು ಕಾಣುತ್ತಿದೆ, ಜನ-ಜಾನುವಾರುಗಳಿಗೆ ನೀರು ಸಿಗಲು ರೈತಸಂಘದ ಹೋರಾಟದಿಂದ ಸಾಧ್ಯವಾಗಿದೆ ಎಂದರು.

ಉಡುಪಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ, ವಕ್ತಾರ ವಿಕಾಸ್ ಹೆಗ್ಡೆ, ಖಜಾಂಚಿ ಭೋಜ ಕುಲಾಲ್, ಹಾಲಾಡಿ ವಲಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಮರತ್ತೂರು, ಕಾವ್ರಾಡಿ ವಲಯಾಧ್ಯಕ್ಷ ಶರಶ್ಚಂದ್ರ ಶೆಟ್ಟಿ, ಕೋಟೇಶ್ವರ ವಲಯ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ಬೀಜಾಡಿ ವಲಯಾಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಸಿದ್ದಾಪುರ ವಲಯಾಧ್ಯಕ್ಷ ಕೆ. ಸದಾಶಿವ ಶೆಟ್ಟಿ, ತ್ರಾಸಿ ವಲಯಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬೈಂದೂರು ವಲಯಾಧ್ಯಕ್ಷ ವಸಂತ ಹೆಗ್ಡೆ ಗೋಳಿಹೊಳೆ, ಮಂದರ್ತಿ ವಲಯಾಧ್ಯಕ್ಷ ಕೃಷ್ಣರಾಜ ಶೆಟ್ಟಿ ಚೋರಾಡಿ, ಹಾರ್ದಳ್ಳಿ-ಮಂಡಳ್ಳಿ ಮಂಡಲ ಸಮಿತಿಯ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ಮೊಳಹಳ್ಳಿ ಮಂಡಲ ಸಮಿತಿಯ ಅಧ್ಯಕ್ಷ ಎಂ. ದಿನೇಶ್ ಹೆಗ್ಡೆ, ಅಮಾಸೆಬೈಲು ಮಂಡಲ ಸಮಿತಿಯ ಕೃಷ್ಣ ಪೂಜಾರಿ, ಬೆಳ್ವೆ ಮಂಡಲ ಸಮಿತಿಯ ಉದಯಕುಮಾರ್ ಪೂಜಾರಿ, ಕುಂದಾಪುರ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜಯ್ಯ ಶೆಟ್ಟಿ, ಹಾರ್ದಳ್ಳಿ ಮಂಡಳ್ಳಿ ಗ್ರಾ.ಪಂ ಅಧ್ಯಕ್ಷ ಸಿ. ಜಗನ್ನಾಥ ಶೆಟ್ಟಿ, ಮೊಳಹಳ್ಳಿ ಗ್ರಾ.ಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹೇಶ್ ಹೆಗ್ಡೆ, ಬೆಳ್ವೆ ವ್ಯ.ಸೇ.ಸ. ಸಂಘದ ಜಯರಾಮ ಶೆಟ್ಟಿ, ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ಜಯಶೀಲ ಶೆಟ್ಟಿ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಮೊದಲಾದವರಿದ್ದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಸತೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಶೆಟ್ಟಿ ಸ್ವಾಗತಿಸಿ, ಬಿದ್ಕಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರೈತಸಂಘದ ಮುಖಂಡ ಉಮೇಶ್ ಶೆಟ್ಟಿ ಶಾನ್ಕಟ್ಟು ವಂದಿಸಿದರು.

ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಚೈತ್ರಾ ಅಡಪ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಸುಜಾತಾ ಶೆಟ್ಟಿ, ನವೀನಚಂದ್ರ ಶೆಟ್ಟಿ, ಉದಯಕುಮಾರ್ ಶೆಟ್ಟಿ, ಆದರ್ಶ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಶೆಟ್ಟಿಗಾರ್ ಜಪ್ತಿ, ಪ್ರಕಾಶ್ ಶೆಟ್ಟಿ ಮತ್ತು ಜಿಲ್ಲಾ ಸಮೂಹ ಸಂಪನ್ಮೂಲ ವ್ಯಕ್ತಿ ನಾಗರಾಜ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ವಾರಾಹಿ, ಡೀಮ್ಡ್ ಸಮಸ್ಯೆ ಪರಿಹಾರಕ್ಕೆ ಆಗ್ರಹ..!
ಡೀಮ್ಡ್ ಸಮಸ್ಯೆ, ವಾರಾಹಿ ನೀರಾವರಿ ಯೋಜನೆ ಸಮಸ್ಯೆಗಳು, ವಿದ್ಯುತ್ ಖಾಸಗೀಕರಣ, ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಸರ್ಕಾರದ ನಿರ್ಲಕ್ಷ್ಯ, ಅಡಿಕೆ ಆಮದು, ತೆಂಗಿನ ಬೆಲೆ ಕುಸಿತ, ಭತ್ತಕ್ಕೆ ಬೆಂಬಲ ಬೆಲೆ ನೀಡದ ಬಗ್ಗೆ, ದುಬಾರಿಯಾಗುತ್ತಿರುವ ಹೈನುಗಾರಿಕೆ ಕುರಿತು ವಿಸ್ತೃತವಾದ ಚರ್ಚೆ ನಡೆಯಿತು. 94ಸಿ ಮಾಡಲು ಹೋದರೂ ಕೂಡ ಡೀಮ್ಡ್ ಎಂದು ಹೇಳುತ್ತಾರೆ. ಕೆಲವು ಕಡೆ ಹಕ್ಕುಪತ್ರ ಕುಡ ನೀಡಿಲ್ಲ. ಹಲವು ಸಮಸ್ಯೆಗಳಿದ್ದು ಇದಕ್ಕೆಲ್ಲಾ ಪರಿಹಾರ ಬೇಕು ಎಂದು ರಾಜೀವ್ ಶೆಟ್ಟಿ, ಉದಯ ಮಡಾಮಕ್ಕಿ, ಬಾಲಚಂದ್ರ ಕುಲಾಲ್ ಯಡಮೊಗೆ ಮೊದಲಾದವರು ಸಮಸ್ಯೆ ಹೇಳಿದರು. ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಒಟ್ಟು 9ಲಕ್ಷದ 94 ಸಾವಿರದ 88 ಹೆಕ್ಟೇರ್ ನಲ್ಲಿ 7 ಲಕ್ಷ 33 ಸಾವಿರದ 326 ಹೆಕ್ಟೇರ್ ಕೈಬಿಡಲಾಗಿದ್ದು 3 ಲಕ್ಷ 30 ಸಾವಿರ 186 ಹೆಕ್ಟೇರ್ ಡೀಮ್ಡ್ ಪಾರೆಸ್ಟ್ ಆಗಿದೆ. ಸರ್ಕಾರದ ಕೆಲ ನಿರ್ಧಾರ ಗೊಂದಲಮಯವಾಗಿದೆ. 9 ಲಕ್ಷದಿಂದ 3 ಲಕ್ಷಕ್ಕೆ ಇಳಿಸಿದ್ದು ಆಶಾದಾಯಕ ವಿಚಾರ. ಬಿಟ್ಟುಹೋದ ಸರ್ವೇ ನಂಬರ್ ಪರಿಶೀಲಿಸಿ ಸಂಬಂಧಪಟ್ಟ ತಹಶಿಲ್ದಾರ್ ಅವರಿಂದ ಮಾಹಿತಿ ಪಡೆಯಲು ರೈತಸಂಘ ಸಹಕಾರ ನೀಡಲಿದೆ ಎಂದರು. ಇನ್ನು ವಾರಾಹಿ ನೀರಾವರಿ ಯೋಜನೆ ಬಹುತೇಕ ಕಡೆ ಮುಗಿದಿಲ್ಲ. ಕೆಲವೆಡೆ ಅರೆಬರೆ ಕಾಮಗಾರಿ ನಡೆದಿದೆ. ಅಗತ್ಯ ಇರುವ ಕಡೆ ನೀರು ಹರಿಯುತ್ತಿಲ್ಲ ಎಂಬ ಬಲವಾದ ಕೂಗು ಕೇಳಿಬಂತು. ಬಹಳಷ್ಟು ಪ್ರದೇಶದಲ್ಲಿ ಕಾಲುವೆ ಕುಸಿದಿದೆ. ಸುವ್ಯವಸ್ಥಿತವಾಗಿ ಕಾಲುವೆಯಲ್ಲಿ ನೀರು ಹರಿಯಲು ಇದನ್ನು ಸರಿಪಡಿಸಬೇಕು ಎಂದು ದೀನಪಾಲ್ ಶೆಟ್ಟಿ ಮೊಳಹಳ್ಳಿ ಹೇಳಿದರು.

ನೀವು‌ ಮುಂದೆ..ನಾವು ಹಿಂದೆ..!
ವಾರಾಹಿ ಯೋಜನೆ ಅಚ್ಚುಕಟ್ಟು ಪ್ರದೇಶದ ರೈತರ ಗ್ರಾಮ ಸಮಿತಿ ಸಭೆ ನಡೆಸಿ ವಾರಾಹಿ ಕಚೇರಿಗೆ ತೆರಳಿ ಮಾಹಿತಿ ಪಡೆಯಬೇಕು. ಸಂಘರ್ಷ ಹಾಗೂ ಹೋರಾಟ ಅನಿವಾರ್ಯವಾದರೆ ನಿಮ್ಮೊಂದಿಗೆ ರೈತ ಸಂಘವಿದೆ. ಕಾನೂನು ಹೋರಾಟ ಅಗತ್ಯವಾದರೆ ಅದರ ಅರ್ಧ ಖರ್ಚನ್ನು ರೈತಸಂಘ ಭರಿಸಲಿದೆ. ಆದರೆ ರೈತಸಂಘವನ್ನು ಮುಂದೆ ಬಿಟ್ಟು ಜನರು ಮನೆಯಲ್ಲಿ ಕುಳಿತರೆ ನಮ್ಮ ಹೆಣ ಹೋಗುತ್ತದೆ. ವಾರಾಹಿ ವಿಚಾರದಲ್ಲಿ ಪಕ್ಷ ರಹಿತವಾದ ಒಗ್ಗಟ್ಟಿನ ಹೋರಾಟದ ಮೂಲಕವಾಗಿ ಇನ್ನು ಕಾಮಗಾರಿ ಕ್ಷಿಪ್ರವಾಗಿ ನಡೆಯುವಂತೆ ಮಾಡೋಣ.
– ಕೆ. ಪ್ರತಾಪಚಂದ್ರ ಶೆಟ್ಟಿ

Comments are closed.