ಕರಾವಳಿ

ಕಳವು ಆರೋಪಿ ಪೊಲೀಸರಿಂದ ಎಸ್ಕೇಪ್; ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..!

Pinterest LinkedIn Tumblr

ಕುಂದಾಪುರ: ತಾಲ್ಲೂಕಿನ ಬೀಜಾಡಿ ರಾ.ಹೆದ್ದಾರಿ ಬಳಿಯಲ್ಲಿನ ಮೊಬೈಲ್ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ನಗರ ಠಾಣೆ ಪೊಲೀಸರಿಂದ ಬಂಧಿಯಾಗಿದ್ದ ಆರೋಪಿ ಮೊಹಮ್ಮದ್ ರಾಹೀಕ್ (22) ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪೊಲಿಸರನ್ನು ತಳ್ಳಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಠಾಣೆ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ ಎಚ್. ಹಿರಿಯಡಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ:
ಕುಂದಾಪುರ ನಗರ ಠಾಣೆ ವ್ಯಾಪ್ತಿಗೊಳಪಡುವ ಬೀಜಾಡಿಯ ಮೊಬೈಲ್ ಅಂಗಡಿ ಕಳವು ಪ್ರಕರಣವೊಂದರ ತನಿಖೆಗಿಳಿದ ಪೊಲೀಸರ ತಂಡ ಆರೋಪಿ ಮೊಹಮ್ಮದ್ ರಾಹೀಕ್ ಅ.19 ರಂದು ಬಂಧಿಸಿದ್ದು ಅ.20 ರಂದು ಆತನನ್ನು ಕುಂದಾಪುರದ ಎ.ಸಿ.ಜೆ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಹಾಗೂ ಸಿಬ್ಬಂದಿ ಬಸನಗೌಡ ಅವರು ಆರೋಪಿಯ ಭದ್ರಿಕೆಯಲ್ಲಿ ಖಾಸಗಿ ವಾಹನದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು. ಅದರಂತೆಯೇ ಪೊಲೀಸರಿಬ್ಬರು ಆರೋಪಿಯ ಜೊತೆಗೆ ಕುಂದಾಪುರದಿಂದ ಹೊರಟು ಗುರುವಾರ ರಾತ್ರಿ 8.25ಕ್ಕೆ ಹಿರಿಯಡ್ಕ ಅಂಜಾರು ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ರಾಹೀಕ್ ಭದ್ರಿಕೆಯಲ್ಲಿದ್ದ ಮಂಜುನಾಥ್ ಹಾಗೂ ಬಸನಗೌಡ ಅವರನ್ನು ತಳ್ಳಿ, ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಲೆಮರೆಸಿಕೊಂಡಿದ್ದಾನೆ.

ಈ ಬಗ್ಗೆ ಹಿರಿಯಡಕ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿ ಮೊಹಮ್ಮದ್ ರಾಹೀಕ್ ನ್ನು ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

Comments are closed.