ಕರಾವಳಿ

ಕುಂದಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧೆಗಿಳಿಯಲಿದ್ದಾರೆಯೇ ಕಿಶನ್ ಹೆಗ್ಡೆ ಕೊಳ್ಕೆಬೈಲ್..?

Pinterest LinkedIn Tumblr

ಉಡುಪಿ: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿದೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಮಾತುಗಳ ನಡುವೆಯೇ ಒಂದಷ್ಟು ಆಕಾಂಕ್ಷಿಗಳ‌ ಹೆಸರು ಕೂಡ ಕೇಳಿ ಬರುತ್ತಿದೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿಯವರನ್ನು ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಿತ್ತು. ಆದರೆ ಈ ಬಾರಿ ಕ್ಷೇತ್ರದಲ್ಲೇ ಇದ್ದು ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷ ತೀರ್ಮಾನಿಸಿದೆ ಎನ್ನಲಾಗುತ್ತಿದೆ.

ಈ ಬಾರಿ ಕುಂದಾಪುರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧೆಗಿಳಿಯುವರ್ಯಾರು..? ಹಲವು ವರ್ಷಗಳಿಂದ ಸೋಲಿನ ಕಹಿ ಅನುಭವಿಸುತ್ತಿರುವ ಕೈ ಪಾಳಯಕ್ಕೆ ಗೆಲುವಿನ ನಗೆ ಬೀರಲು ಏನು ಮಾಡಬೇಕೆಂಬುದು ಕೂಡ ಪಕ್ಷ ಲೆಕ್ಕಾಚಾರ ಹಾಕುತ್ತಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಬೇಕು, ಬದಲಾವಣೆ ಪರ್ವಕ್ಕೆ ಮುನ್ನುಡಿ ಬರೆಯಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ. ಈ ಹಿಂದೆ ಪರಾಜಿತರಾಗಿದ್ದ ಉದ್ಯಮಿ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿಯವರ ಹೆಸರು ಅಭ್ಯರ್ಥಿಯಾಗಿ ಕೇಳಿಬಂದಿದ್ದು ಬಳಿಕ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಹೆಸರು ಕೂಡ ರಾಜಕೀಯ ವಲಯದಲ್ಲಿ ಕೇಳಲು ಆರಂಭವಾಗಿತ್ತು. ಆದರೆ ಇದೀಗಾ ಮತ್ತೊಬ್ಬ ಅಭ್ಯರ್ಥಿ ಹೆಸರು ಕೂಡ ರಾಜಕೀಯ ಪಡಸಾಲೆಯಲ್ಲಿ ಮುಂಚೂಣಿಯಲ್ಲಿದ್ದು ಅವರೇ ಕಿಶನ್ ಕುಮಾರ್ ಹೆಗ್ಡೆ ಕೊಳ್ಕೆಬೈಲು. 2013 ವಿಧಾನಸಭಾ ಚುನಾವಣೆಯಲ್ಲಿ ಕಿಶನ್ ಹೆಗ್ಡೆ ಅವರು ಕೊನೆಯ ಕ್ಷಣದಲ್ಲಿ ಟಿಕೆಟ್ ವಂಚಿತರಾಗಿದ್ದರು.

ಉಡುಪಿ ಜಿಲ್ಲೆ ಶಿರಿಯಾರದ ಕೊಳ್ಕೆಬೈಲ್ ನಿವಾಸಿಯಾದ ಕಿಶನ್ ಕುಮಾರ್ ಹೆಗ್ಡೆ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ದುಡಿದವರು. ಮೆಕ್ಯಾನಿಕಲ್‌ನಲ್ಲಿ ಡಿಪ್ಲೊಮಾ ಮುಗಿಸಿದ ಬಳಿಕ ಸಾರಿಗೆ ಮತ್ತು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಹಕಾರಿಯಾಗಿ ಗುರುತಿಸಿಕೊಂಡವರು. ರಾಜಕೀಯ ಕ್ಷೇತ್ರ, ಸಾಮಾಜಿಕ ಸೇವೆ, ಸಹಕಾರಿಯಾಗಿ ಸೈ ಎನಿಸಿಕೊಂಡ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರಿಗೆ ಈ ಬಾರಿ ಕುಂದಾಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು. ಈ ಮೂಲಕ ಪಕ್ಷ ಸಂಘಟನೆಗಾಗಿ ತೊಡಗಿಸಿಕೊಂಡವರಿಗೆ ಹೈಕಮಾಂಡ್ ಗುರುತಿಸಬೇಕು ಎಂಬ ಬಲವಾದ ಕೂಗು ಕೊಳ್ಕೆಬೈಲು ಅವರ ಅಭಿಮಾನಿಗಳ ವಲಯದಲ್ಲಿ ಕೇಳಿಬರುತ್ತಿದೆ. ನೇರ ನಡೆ ನುಡಿಯ ಕಿಶನ್ ಹೆಗ್ಡೆ ಕೊಳ್ಕೆಬೈಲು ಅನ್ಯಾಯದ ವಿರುದ್ಧ ಯಾವುದೇ ಮುಲಾಜಿಲ್ಲದೆ ಧ್ವನಿಯೆತ್ತುವ ನಿಷ್ಟೂರವಾದಿ. ಹೋರಾಟವೆಂದು ಬಂದರೆ ಮುಂಚೂಣಿಯಲ್ಲಿ ನಿಲ್ಲುವ ಸಮರ್ಥ ಹೋರಾಟಗಾರ. ಪಕ್ಷ ಸಂಘಟನೆ ವಿಚಾರದಲ್ಲಿ ರಾತ್ರಿ ಹಗಲೆನ್ನದೆ ದುಡಿಯುವ ನಿಷ್ಟ. ಇದೆಲ್ಲಾ ಪಾಸಿಟಿವ್ ವಿಚಾರಗಳು ಕೊಳ್ಕೆಬೈಲು ಟಿಕೆಟ್ ಪಡೆಯಲು ಪೂರಕವಾದ ಅಂಶಗಳು ಎಂದರೂ ತಪ್ಪಾಗಲಾರದು.

ಇನ್ನು ಕಿಶನ್ ಹೆಗ್ಡೆಯವರ ರಾಜಕೀಯ ಹಾಗೂ ಸಹಕಾರಿ ಪುಟಗಳನ್ನು ತೆರೆಯುತ್ತಾ ಹೋದರೆ 1984 ರಿಂದ ರಾಜಕೀಯದಲ್ಲಿ ಇವರು ಸಕ್ರೀಯರಾಗಿದ್ದಾರೆ. 2010ರಿಂದ ಈವರೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ಅಧ್ಯಕ್ಷರಾಗಿದ್ದು ಉಡುಪಿ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರು. ಕರ್ನಾಟಕ ರಾಜ್ಯ ಸಹಕಾರಿ ಫೆಡರೇಶನ್ ಲಿಮಿಟೆಡ್ ಬೆಂಗಳೂರಿನ ಮಾಜಿ ನಿರ್ದೇಶಕ. ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಂಗಳೂರಿನ ಮಾಜಿ ಉಪಾಧ್ಯಕ್ಷರು ಕೂಡ ಹೌದು.

ಇನ್ನು ಉಡುಪಿ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಯೂನಿಯನ್ ಲಿಮಿಟೆಡ್ ಉಡುಪಿ ಒಕ್ಕೂಟದ ಅಧ್ಯಕ್ಷರಾಗಿ 2003 ಆಯ್ಕೆಯಾಗಿ ಕಳೆದ 14 ವರ್ಷಗಳಿಂದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರಾಗಿ 1999ರಲ್ಲಿ ಚುನಾಯಿತರಾಗಿದ್ದಾರೆ ಮತ್ತು ಮಾರ್ಚ್ 2017ರವರೆಗೆ 17 ವರ್ಷ ಅಧ್ಯಕ್ಷರಾಗಿದ್ದಾರೆ.

ರಾಜ್ಯ ಸಹಕಾರ ಫೆಡರೇಶನ್ ಲಿಮಿಟೆಡ್ ಮಾಜಿ ನಿರ್ದೇಶಕರು. ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ, ಶಿರಿಯಾರ ಅಗ್ರಿಕಲ್ಚರ್ ಕೋ-ಆಪ್ ಸೊಸೈಟಿ ಲಿ. ನಿರ್ದೇಶಕ, ಉಡುಪಿ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ನಿರ್ದೇಶಕ, ರೈತರ ಸೇವಾ ಸಹಕಾರ ಸಂಘ ಹಿರಿಯಡ್ಕದ ಮಾಜಿ ನಿರ್ದೇಶಕ.
ಉಡುಪಿ ಲ್ಯಾಂಪ್ಸ್ ಸೊಸೈಟಿಯ ಮಾಜಿ ನಿರ್ದೇಶಕರಾಗಿದ್ದಾರೆ. ಇಷ್ಟೇ ಅಲ್ಲದೆ 1991-95ರವರೆಗೆ ಕರ್ನಾಟಕ ರಾಜ್ಯ ಕಿಸ್ಸಾನ್ ಸೆಲ್ ನಲ್ಲಿ ಸೇವೆ. ಹಾಗೂ ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ನಿರ್ದೇಶಕರಾಗಿದ್ದವರು.

ಸೇವಾ ಮನೋಭಾವನೆಯ ಕಿಶನ್ ಹೆಗ್ಡೆ..
ಪರೋಪಕಾರಾರ್ಥಂ ಇದಂ ಶರೀರಂ ಎಂಬ ಮಾತಿಗೆ ಅನುಗುಣವಾಗಿ ನಡೆಯುವ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತನ್ನ ಅನೇಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದು ತನ್ನ ಟ್ರಾನ್ಸ್‌ಪೋರ್ಟ್ ಉಧ್ಯಮ ಕ್ಷೇತ್ರದಲ್ಲಿಯುವ ಅನೇಕ ಬಡಕುಟುಂಬಗಳಿಗೂ ಉದ್ಯೋಗ ನೀಡಿ ಅವರ ಮನೆ ಬೆಳಕಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ, ಅಶಕ್ತರಿಗೆ, ಅನಾರೋಗ್ಯ ಬಾಧಿತರಿಗೆ ಅಗತ್ಯ ಸಹಾಯ ಮಾಡುತ್ತಾ ಬಂದಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡಿ ಅವರಲ್ಲಿ‌ ನಾಯಕತ್ವ ಗುಣ ಹುಟ್ಟು ಹಾಕುವ ಮೂಲಕ ರಾಜ್ಯ ಮಟ್ಟಕ್ಕೆ ಕಳುಹಿಸಿ ಅವರನ್ನು ನಾಯಕರನ್ನಾಗಿ ಬೆಳೆಸಿದ ಕೀರ್ತಿ ಇವರದ್ದು. ಅದಕ್ಕಾಗಿ ಯೂತ್ ಕಾಂಗ್ರೆಸ್ ಸಹಿತ ಯುವಕರ ತಂಡವೇ ಇವರ ಜೊತೆಗಿದೆ. ಕೋಟ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮ, ಪಕ್ಷ ಬಲವರ್ಧನೆ ವಿಚಾರದಲ್ಲಿ ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವ ಕೊಳ್ಕೆಬೈಲು ಫಲಾಪೇಕ್ಷೆ ರಹಿತವಾಗಿ ತೊಡಗಿಸಿಕೊಂಡವರು.

ಈಗಾಗಲೇ ಹೈಕಮಾಂಡ್ ವಲಯದಲ್ಲಿ ಇರುವ ಮೂರು ಹೆಸರುಗಳಲ್ಲಿ ಕಿಶನ್ ಹೆಗ್ಡೆ ಅವರ ಹೆಸರು ಕೆಪಿಸಿಸಿ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

Comments are closed.