ಬೆಂಗಳೂರು: ಬಿಜೆಪಿಯವರು ತಾವು ನಡೆಸುತ್ತಿರುವ ‘ಜನಸಂಕಲ್ಪ ಯಾತ್ರೆ’ ಎಂಬ ಹೆಸರಿನ ಬದಲು ‘ಜನರಿಗೆ ಸುಳ್ಳು ಹೇಳುವ ಯಾತ್ರೆ’ ಎಂದು ನಾಮಕರಣ ಮಾಡುವುದು ಒಳ್ಳೆಯದು. ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಹೇಳುವುದಿದ್ದರೂ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಒಂದಿಷ್ಟು ತೂಕ ಬರುತ್ತದೆ. ತಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ” ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಅವರು, “ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತಂದು ದಲಿತ- ದಮನಿತರು ಹಾಗೂ ಸರ್ವಜನಾಂಗದ ಏಳಿಗೆಗೆ ಕಾರಣರಾಗಿದ್ದು ಕಾಂಗ್ರೆಸ್ ಪಕ್ಷ. 2013 ರಿಂದ ಈಚೆಗೆ ರಾಜ್ಯದಲ್ಲಿ ನಾವು ಬಡ್ತಿ ಮೀಸಲಾತಿ ತಂದೆವು. ಎಸ್ಸಿಪಿ, ಟಿಎಸ್ಪಿ ಕಾಯ್ದೆಯನ್ನು ಜಾರಿಗೆ ತಂದು ಅನುದಾನಗಳನ್ನು ಕಾದಿರಿಸುವ ಕಾಯ್ದೆ ತಂದೆವು. ಗುತ್ತಿಗೆಗಳಲ್ಲಿ ಮೀಸಲಾತಿ ತಂದೆವು. ಆದರೆ ಬಿಜೆಪಿ ಏನು ಮಾಡಿದೆ? ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನಗಳನ್ನು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಕಾಮಗಾರಿಗಳ ಗುತ್ತಿಗೆಗಳಲ್ಲಿ ದಲಿತ ಸಮುದಾಯದವರಿಗೆ ನಾವು ಮೀಸಲಾತಿ ತಂದರೆ ಬೊಮ್ಮಾಯಿ ಸರ್ಕಾರ 2 ಕೋಟಿ ವರೆಗಿನ ಕಾಮಗಾರಿಗಳಿಗೆ ಟೆಂಡರ್ ಕೂಡ ಕರೆಯದೆ ಕೆಆರ್ಡಿಸಿಎಲ್ ನವರಿಗೆ ವಹಿಸುವ ನೀತಿ ತಂದಿದ್ದಾರೆ. ಇದರಿಂದಾಗಿ ದಲಿತ ಸಮುದಾಯಗಳ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗುತ್ತಿಲ್ಲ. ಇಂಥ ದಲಿತ ವಿರೋಧಿ ನೀತಿಗಳಿಗೆ ಏನೆನ್ನಬೇಕು?
ಮೀಸಲಾತಿಯನ್ನು ವಿರೋಧಿಸಿದವರು, ದಲಿತ- ಹಿಂದುಳಿದ ಸಮುದಾಯದ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಿದವರು, ಈ ಸಮುದಾಯಗಳ ಜನರಿಗೆ ಮನೆಗಳನ್ನು ನೀಡದವರು, ಉದ್ಯೋಗ ನೀಡದವರು, ಸಮರ್ಪಕವಾಗಿ ಜನರಿಗೆ ಅನ್ನ ನೀಡದ ಬಿಜೆಪಿಯವರು ಅದು ಹೇಗೆ ಹಿಂದುಳಿದವರ, ದಲಿತರ ಪರವಾಗಿದ್ದೇವೆಂದು ಹೇಳಲು ಸಾಧ್ಯ?’.
“ನನ್ನ 5 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಂದರಿಂದಲೆ 10500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೆವು. ಆದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ಸರ್ಕಾರ ಸೇರಿ ಮಾರ್ಚ್ವರೆಗೆ ಖರ್ಚು ಮಾಡಿದ್ದು ಕೇವಲ 5700 ಕೋಟಿ ಮಾತ್ರ. ಈ ವರ್ಷ 2371 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಾಗಿ ಹೇಳಿದ್ದಾರೆ. ಇದು ಹಿಂದುಳಿದ ವರ್ಗಗಳನ್ನು ಉದ್ಧಾರ ಮಾಡುವ ರೀತಿಯೆ? ದಲಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಬರಲು ಅರಿವು ಎಂಬ ಯೋಜನೆ ತಂದಿದ್ದೆವು. ಇದರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ ಎಂಬ ಅಂಕಿ ಅಂಶ ಮಂಡಿಸಿ. ನನಗಿರುವ ಮಾಹಿತಿಯಂತೆ ಒಬ್ಬ ವಿದ್ಯಾರ್ಥಿಗೂ ಅವಕಾಶ ಮಾಡಿಕೊಟ್ಟಿಲ್ಲ.
ನಮ್ಮ ಸರ್ಕಾರದ ಅವಧಿಯಲ್ಲಿ ದಲಿತ ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1471 ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳನ್ನು ಕಟ್ಟಿದ್ದೆವು. 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಅಸಂಖ್ಯಾತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿದ್ದೆವು. ಈ ವರ್ಗದವರಿಗೆ ಸಾಲ ಸೌಲಭ್ಯ, ಉದ್ಯೋಗಗಳನ್ನು ಒದಗಿಸಿಕೊಡಲು ಒತ್ತು ನೀಡಿದ್ದೆವು”.
“ನಾನು ಅಂಕಿ ಅಂಶಗಳ ಮೂಲಕ ಚರ್ಚೆಗೆ ಸಿದ್ಧನಿದ್ದೇನೆ. ಬಿಜೆಪಿಯವರೂ ಅಂಕಿಅಂಶಗಳೊಂದಿಗೆ ಚರ್ಚೆಗೆ ಬರಲಿ. ಅದು ಬಿಟ್ಟು ಉತ್ತರಕುಮಾರರಂತೆ, ವಿದೂಷಕರಂತೆ ವರ್ತಿಸುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆ. ಯಡಿಯೂರಪ್ಪನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯನವರಿಗೆ ಮೋದಿಯವರ ಕಾಲಿನಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ ಅಂದಿದ್ದಾರೆ. ಅಂಥ ಗುಲಾಮಗಿರಿಯ ಯೋಗ್ಯತೆ ಯಡಿಯೂರಪ್ಪನಂಥವರಿಗೆ ಇರಲಿ, ನನ್ನಂಥವರಿಗೆ ಅದು ಹೊಂದಾಣಿಕೆಯಾಗುವುದಿಲ್ಲ. ನಮ್ಮ ಪಕ್ಷದಲ್ಲಿ ಕಾಲ ಕೆಳಗೆ ಕುಳಿತುಕೊಳ್ಳುವ ಸಂಸ್ಕೃತಿ ಇಲ್ಲ. ನಾವು ಭುಜಕ್ಕೆ ಭುಜ ತಾಗಿಸಿ ನಡೆವ ಡೆಮಾಕ್ರಟಿಕ್ ಸಂಸ್ಕೃತಿಯವರು ಎಂದು ಯಡಿಯೂರಪ್ಪನವರ ಗಮನಕ್ಕೆ ತರಬಯಸುತ್ತೇನೆ” ಎಂದು ಆಕ್ರೋಷಿತರಾಗಿ ಬರೆದಿದ್ದಾರೆ.
Comments are closed.