ಕರ್ನಾಟಕ

ಪೋನ್‌ನಲ್ಲಿಯೇ‌ ಸಮಸ್ಯೆಗೆ ಪರಿಹಾರ ನೀಡುವುದಾಗಿ ಮಹಿಳೆಗೆ ಲಕ್ಷ ರೂ. ವಂಚನೆ; ‘ಸೋ ಕಾಲ್ಡ್ ಜ್ಯೋತಿಷಿ’ ಪೊಲೀಸರ ಅತಿಥಿ..!

Pinterest LinkedIn Tumblr

ಚಿಕ್ಕಮಗಳೂರು: ಎಲ್ಲ ರೀತಿಯ ಸಮಸ್ಯೆಗಳಿಗೆ ಪೋನ್‌ನಲ್ಲಿಯೇ ಪರಿಹಾರ ನೀಡುವುದಾಗಿ ಮಹಿಳೆಗೆ ವಂಚಿಸಿ ಹಣ ವರ್ಗಾಯಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿ, ಬೆಂಗಳೂರಿನ ಗಣೇಶ್‌ ಗೊಂದಳೆ ಪೊಲೀಸರಿಂದ ಬಂಧಿತನಾದ ಆರೋಪಿ. ಈತ ಬೆಂಗಳೂರಿನ ಸಹಕಾರ ನಗರದ ನಿವಾಸಿಯಾಗಿದ್ದಾನೆ. ಈತನನ್ನು 87,500 ನಗದು, ಮೊಬೈಲ್‌ ಪೋನ್‌, ಎರಡು  ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಲ್ಲಾ ರೀತಿಯ ಸಮಸ್ಯೆಗಳನ್ನು ಫೋನ್‌ನಲ್ಲಿ ಪರಿಹರಿಸಲಾಗುವುದು ಎಂಬುದಾಗಿ Pandit Modi Bettappa Astrology ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಈತ ಜಾಹಿರಾತನ್ನು ನೀಡಿದ್ದ.

ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಫೇಸ್‌ಬುಕ್‌ ಪೇಜ್‌ನಲ್ಲಿ ಜಾಹೀರಾತು ನೋಡಿದ್ದ ಮಹಿಳೆಯು, ತನ್ನ ಕುಟುಂಬದಲ್ಲಿದ್ದ ಸಮಸ್ಯೆ ಪರಿಹಾರಕ್ಕಾಗಿ ಜಾಹೀರಾತಿನಲ್ಲಿದ್ದ ಫೋನ್‌ ನಂಬರ್‌ಗಳಿಗೆ ಕರೆ ಮಾಡಿದ್ದಾರೆ. ಅಲ್ಲದೇ, ತನ್ನ ಕುಟುಂಬದ ಸಮಸ್ಯೆ ಸರಿ ಮಾಡಿಕೊಡಿ ಎಂದು ಈ ವ್ಯಕ್ತಿ ಬಳಿ ಕೇಳಿಕೊಂಡಿದ್ದಾರೆ.

ಆಗ ಜ್ಯೋತಿಷಿ ಹೆಸರಿನ ಗಣೇಶ್, ನಿಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತೇನೆ, ಇದಕ್ಕಾಗಿ 7 ಸಾವಿರ ಖರ್ಚಾಗುತ್ತದೆ ಎಂದು ಹೇಳಿದ್ದಾರೆ. ಆಗ ಮಹಿಳೆಯು ಗೂಗಲ್‌ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಜ್ಯೋತಿಷಿಯು ಪುನಃ ಬೇರೆ ಬೇರೆ ಪೂಜೆ ಮಾಡಬೇಕು, ಆಗ ಸಮಸ್ಯೆ ಸರಿ ಆಗುತ್ತೆ ಎಂದು ನಂಬಿಸಿ, ಹಂತ ಹಂತವಾಗಿ ಮಹಿಳೆಯಿಂದ 1 ಲಕ್ಷದ 16 ಸಾವಿರ 1 ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಈತ ಇನ್ನು ಹಲವು ಸಮಸ್ಯೆಗಳಿವೆ ಎಂದು ಹೇಳಿ ಪೂಜೆ ಖರ್ಚಿಗೆ ಕೂಡಲೇ ಹಣ ಕಳುಹಿಸಿ ಎಂದು ಮಹಿಳೆಗೆ ಹೇಳಿದ್ದಾನೆ. ಆಗ ಜ್ಯೋತಿಷಿಯ ಬಗ್ಗೆ ಮಹಿಳೆ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್‌. ಅಪರಾಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದು ನಕಲಿ ಜ್ಯೋತಿಷಿ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ತಂಡದಲ್ಲಿ ಇನ್ಸ್‌ಪೆಕ್ಟರ್ ಮುತ್ತರಾಜ್, ಸೆನ್ ಠಾಣೆ ಪಿಎಸ್ಐ ನಾಸೀರ್ ಹುಸೇನ್ ಮತ್ತು ರಘುನಾಥ್ ಎಸ್. ವಿ., ಸಹಾಯಕ ಉಪನಿರೀಕ್ಷಕ ಎಂ. ಸಿ. ಪ್ರಕಾಶ್ ಮತ್ತು ಸಿಬ್ಬಂದಿಗಳಾದ ವಿನಾಯಕ ಮತ್ತು ಅನ್ವರ್ ಪಾಷಾ ರವರು ಕಾರ್ಯನಿರ್ವಹಿಸಿದ್ದರು.

Comments are closed.