ಕರಾವಳಿ

ಬೈಂದೂರು ಕ್ಷೇತ್ರದಲ್ಲಿ 250 ಕಾಲು ಸಂಕಗಳ ಪಟ್ಟಿ ಮಾಡಿದ್ದು ಅನುದಾನಕ್ಕೆ ಸಚಿವರಲ್ಲಿ ಮನವಿ: ಬಿ.ವೈ ರಾಘವೇಂದ್ರ

Pinterest LinkedIn Tumblr

ಕುಂದಾಪುರ: ತಾಲ್ಲೂಕು ಕೇಂದ್ರವಾಗಿರುವ ಬೈಂದೂರನ್ನು ಉನ್ನತೀಕರಣ ಮಾಡುವುದರ ಜೊತೆಗೆ ನವ ಬೈಂದೂರು ನಮ್ಮ ಗುರಿಯಾಗಿದೆ. ಹೀಗಾಗಿ ಆದ್ಯತೆ ಮೇರೆಗೆ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ 250 ಕಾಲು ಸಂಕಗಳ ಪಟ್ಟಿ ಮಾಡಲಾಗಿದ್ದು, ಕಳೆದ ಆರು ತಿಂಗಳ ಹಿಂದೆ ಶಾಸಕರ ಮುತುವರ್ಜಿಯಿಂದ 10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿ ಟೆಂಡರ್ ಪ್ರಕ್ರಿಯೆ ಕೂಡ ನಡೆದಿತ್ತು. ಮತ್ತೆ ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವರೊಂದಿಗೆ ಮಾತನಾಡಿ 100 ಕಾಲು ಸಂಕಗಳಿಗೆ 5 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆಯನ್ನು ಪಡೆದುಕೊಂಡು ಬಂದಿದ್ದು, ಕ್ಷೇತ್ರದಲ್ಲಿ ಕಾಲು ಸಂಕಗಳ ಅಭಿವೃದ್ದಿಗೆ ಇನ್ನೂ ಹದಿನೈದು ಕೋಟಿ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಅವರು ಗುರುವಾರ ಮಧ್ಯಾಹ್ನ ಕೊಲ್ಲೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅತಿವೃಷ್ಠಿಯಿಂದಾಗಿ ಸಾಕಷ್ಟು ಆಸ್ತಿ-ಪಾಸ್ತಿಗಳು ಹಾನಿಯಾಗಿವೆ. ಅತಿವೃಷ್ಠಿಯಿಂದಾಗಿ ಮನೆ, ಆಸ್ತಿ, ಬೆಳೆ ಹಾನಿಯಾದವರಿಗೆ ಮತ್ತು ಮೀನುಗಾರಿಕಾ ಬೋಟು, ಬಲೆಗಳನ್ನು ಕಳೆದುಕೊಂಡವರಿಗೆ ತುರ್ತು ಪರಿಹಾರವನ್ನು ಈಗಾಗಲೇ ನೀಡಲಾಗಿದೆ. ಮೂರು ವರ್ಷಕ್ಕಾಗುವ ಮಳೆ ಒಂದೇ ಬಾರಿ ಸುರಿದ ಪರಿಣಾಮವಾಗಿ ರೈತರು ಬೆಳೆದ ಬೆಳೆ, ಅಲ್ಲಲ್ಲಿ ರಸ್ತೆಗಳು ಹಾನಿಯಾಗಿದೆ. ಪ್ರಾಕೃತಿಕ ವಿಕೋಪದಿಂದ ಬೈಂದೂರು ಕ್ಷೇತ್ರದಲ್ಲಿ ಮನೆ ಕಳೆದುಕೊಂಡವರಿಗೆ, ದೋಣಿ, ಮೀನಿನ ಬಲೆ ಹಾನಿಯಾದವರ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪದ ಅಡಿಯಲ್ಲಿ ಸುಮಾರು 50 ಲಕ್ಷಕ್ಕಿಂತ ಹೆಚ್ಚು ಅನುದಾನವನ್ನು ಶಿವಮೊಗ್ಗ ಲೋಕಸಭಾ ವ್ಯಾಪ್ತಿಯ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಕೊಟ್ಟಿದ್ದೇವೆ ಎಂದರು.

ಪಿಪಿಪಿ ಮಾದರಿಯಲ್ಲಿ ರೂ 228.00 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೀ ಪ್ಲೇನ್, ಮರೀನಾ ಹಾಗೂ ಬಹುಪಯೋಗಿ ಬಂದರು ಯೋಜನೆ ಟೆಂಡರ್ ಹಂತದಲ್ಲಿದೆ. ರೂ 165.00 ಕೋಟಿ ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ ಅನುಮೋದನೆ ಸಿಕ್ಕಿದೆ. ರೂ. 73.71 ಕೋಟಿ ವೆಚ್ಚದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೇ ರೂ. 35.00 ಕೋಟಿ ವೆಚ್ಚದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು ಗೇಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಜೊತೆಗೆ ಮಾದರಿ ವಿದ್ಯುತ್ ಗ್ರಾಮ ಯೋಜನೆ ಅಡಿಯಲ್ಲಿ ಕಿರಿಮಂಜೇಶ್ವರ ಗ್ರಾಮದಲ್ಲಿ ಸಮಗ್ರ ವಿದ್ಯುತ್ ನಿರ್ವಹಣೆ ಯೋಜನೆ ಅಂತಿಮ ಹಂತದಲ್ಲಿದೆ ಎಂದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕಾಲು ಸಂಕದಿಂದ ಬಿದ್ದು ನೀರುಪಾಲಾದ ಸನ್ನಿಧಿ ಘಟನೆ ದೌರ್ಭಾಗ್ಯದ ಸಂಗತಿ. ಬೈಂದೂರು ಶಾಸಕರು ಹಾಗೂ ನಾನು ವೈಯಕ್ತಿಕವಾಗಿ ಆರ್ಥಿಕ ಸಹಕಾರ ನೀಡಿದ್ದೇವೆ. ಅಲ್ಲದೆ ಮಾನವ ಜೀವಹಾನಿ ಪ್ರಕರಣದಡಿ ಸರ್ಕಾರ 5 ಲಕ್ಷ ಪರಿಹಾರ ನೀಡಿದೆ. ಸನ್ನಿಧಿ ಕಾಲು ಸಂಕ ಸಮಸ್ಯೆಯಿಂದ ಜೀವ ಕಳೆದುಕೊಂಡಿದ್ದಾಳೆ. ಈ ಪ್ರಕರಣ ನಡೆದಿರುವುದು ಮರೆಯಲಾಗದ ದುರ್ಘಟನೆ. ಮುಂದೆ ಇಂತಹ ಘಟನೆಯಾಗದಂತೆ ಆದ್ಯತೆ ಮೇರೆಗೆ‌ ಅಗತ್ಯ ಕ್ರಮ ವಹಿಸುತ್ತೇವೆ.
– ಬಿ.ವೈ ರಾಘವೇಂದ್ರ (ಸಂಸದ)

Comments are closed.