ಕರಾವಳಿ

ಸನ್ನಿಧಿ ಮೃತದೇಹ ಪತ್ತೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ತಂಡದ ಸಾಹಸ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಾಲುಸಂಕದಿಂದ ಬಿದ್ದು ನೀರುಪಾಲಾದ ಸನ್ನಿಧಿ ಮೃತದೇಹ ಬುಧವಾರ ಸಂಜೆ ಪತ್ತೆಯಾದ ಹಿಂದೆ ಈ ತಂಡದ ಶ್ರಮವಿದೆ.

ಬುಧವಾರ 11 ಗಂಟೆಯ ಬಳಿಕ ಸ್ಥಳಕ್ಕಾಗಮಿಸಿದ ಕಾಳಾವರದ ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ತಂಡವು ಸತತ ಏಳು ಗಂಟೆಗಳ ಕಾಲ ಕಾರ್ಯಾರಣೆ ನಡೆಸಿದರು. ಕೊನೆಗೆ ಬಾಲಕಿ ಬಿದ್ದ ಕಾಲುಸಂಕ ಇರುವ ಸ್ಥಳದಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆಯಲ್ಲಿ ಕಾಲುಸಂಕದಿಂದ 400 ಮೀಟರ್ ದೂರದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ, ಅಗ್ನಿಶಾಮಕ ದಳ ಕಾರ್ಯಾಚರಣೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆ, ಮೀನುಗಾರರು, ಈಜುಪಟುಗಳು ಸ್ವಯಂಪ್ರೇರಿತವಾಗಿ ಬಂದು ತೊಡಗಿಸಿಕೊಂಡಿದ್ದರು.

ಸನ್ನಿಧಿ ಮೃತದೇಹ ಪತ್ತೆ ಕಾರ್ಯದಲ್ಲಿ ಕಾಳಾವರ ಶೌರ್ಯ ಘಟಕದ ಸಂಯೋಜಕ ರಾಜಶೇಖರ್, ಸುಜೀತ್ ಕುಮಾರ್ ಶೆಟ್ಟಿ, ಪ್ರಕಾಶ್ ಆಚಾರ್, ಶೇಖರ್ ಕವರಿಕೆರೆ, ಸುನೀಲ್ ಕುಮಾರ್ ಶೆಟ್ಟಿ, ಅಂಪಾರು ಘಟಕದ ಮಂಜುನಾಥ ನಾಯ್ಕ್, ಉಮೇಶ್ ನೆಲ್ಲಿಕಟ್ಟೆಯವರಿದ್ದ 7 ಜನರ ತಂಡ ಈ ಕಾರ್ಯಾಚರಣೆಯಲ್ಲಿದ್ದರು.

ಧರ್ಮಸ್ಥಳ ಕ್ಷೇತ್ರದ ಮಂಜುನಾಥಸ್ವಾಮಿ ಪ್ರೇರಣೆ ಹಾಗೂ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧ.ಗ್ರಾ. ಯೋಜನೆಯ ಶೌರ್ಯ ತಂಡದಿಂದ ಸಮಾಜಸೇವೆ ಮಾಡಲಾಗುತ್ತಿದೆ. ಕಾಲ್ತೋಡು ಸನ್ನಿಧಿ ಪ್ರಕರಣ ಮಾಧ್ಯಮದಿಂದ ತಿಳಿದು ನಮ್ಮ ಕೈಯಲ್ಲಾದ ಸೇವೆ ಮಾಡುವ ನಿಟ್ಟಿನಲ್ಲಿ ಆಗಮಿಸಿದೆವು. ನೀರಿಗೆ ಧುಮುಕಿ ಸತತ 7 ಗಂಟೆ ಹುಡುಕಾಟ ನಡೆಸಿದೆವು. ಇದು ನಮಗೆ ಹೊಸ ಛಾಲೆಂಜ್ ಆಗಿತ್ತು. ಸುಮಾರು 300-400 ಮೀಟರ್ ದೂರದಲ್ಲಿ ಶೌರ್ಯ ತಂಡದ ಕಾರ್ಯಕರ್ತ ಮುಳುಗಿ ಹುಡುಕಾಡುತ್ತಿದ್ದಾಗ ಬೇರಿನಡಿ ಮೃತ ಬಾಲಕಿ ತಲೆ ಸಿಕ್ಕಿಕೊಂಡಿರುವುದು ತಿಳಿದುಬಂದಿತ್ತು. ತಕ್ಷಣ ಮೃತದೇಹ ಮೇಲಕ್ಕೆತ್ತಲಾಗಿತ್ತು.
– ರಾಜಶೇಖರ್ (ಕಾಳಾವರ ಶೌರ್ಯ ತಂಡದ ಸಂಯೋಜಕ)

Comments are closed.