ಕರಾವಳಿ

ಪರೀಕ್ಷೆ ಫಲಿತಾಂಶ, ಅಂಕಪಟ್ಟಿ, ಮೌಲ್ಯಮಾಪನ ವಿಚಾರದಲ್ಲಿ ಸಮಸ್ಯೆ: ಎಬಿವಿಪಿ ನೇತೃತ್ವ ಕುಂದಾಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪದವಿ ಪರೀಕ್ಷಾ ಫಲಿತಾಂಶ, ಅಂಕಪಟ್ಟಿ ಹಾಗೂ ಮೌಲ್ಯಮಾಪನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಾಗುತ್ತಿರುವ ಸಮಸ್ಯೆಯ ಬಗ್ಗೆ ಎಬಿವಿಪಿ‌ ನೇತೃದಲ್ಲಿ ಶನಿವಾರ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಕುಂದಾಪುರ ಶಾಸ್ತ್ರೀ ವೃತ್ತದಿಂದ ಸಾಗಿಬಂದ ಬೃಹತ್ ಪ್ರತಿಭಟನೆ ಮೆರವಣಿಗೆ ಕುಂದಾಪುರದ ಮಿನಿವಿಧಾನ ಸೌಧದ ತನಕ ಸಾಗಿ ಬಂದಿತು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ತರಗತಿಗಳಿಗೆ ನಡೆದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷೆಯ ಅಂಕಪಟ್ಟಿಗಳು ಪರೀಕ್ಷಾ ಫಲಿತಾಂಶ ದೊರಕಿ ತಿಂಗಳುಗಳಾದರೂ ವಿದ್ಯಾರ್ಥಿಗಳ ಕೈ ಸೇರಿಲ್ಲ. ಜತೆಗೆ ಕೆಲವು ವಿಭಾಗಗಳ ಫಲಿತಾಂಶಗಳೂ ಪ್ರಕಟವಾಗಿಲ್ಲ. ಇದರಿಂದಾಗಿ ಪ್ರತಿಷ್ಠಿತ ಕಂಪೆನಿಗಳಿಗೆ ಕ್ಯಾಂಪಸ್ ನಿಂದ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮುಖ ದಾಖಲೆಯಾಗಿ ಅಂಕಪಟ್ಟಿ ಸಲ್ಲಿಸಲಾಗುತ್ತಿಲ್ಲ ಹೀಗಾಗಿ ಅವರನ್ನು ಉದ್ಯೋಗದಿಂದ ಕೈ ಬಿಡಲಾಗುತ್ತಿದ್ದು, ಈಗಾಗಲೇ ಹಲವು ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ. ಹಾಗೇ ದಿನಾಂಕ 03-08-2022 ರಲ್ಲಿ ಪ್ರಕಟವಾದ ಪದವಿ ತರಗತಿಗಳ ತೃತೀಯ ಹಾಗೂ ಪಂಚಮ ಸೆಮಿಸ್ಟರ್‌ ಫಲಿತಾಂಶಗಳಲ್ಲೂ ಹಲವಾರು ದೋಷಗಳಿದ್ದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹಂಚಿಕೊಂಡರು.

ಇನ್ನು ಪ್ರಥಮ ಸೆಮಿಸ್ಟರ್ ಪರೀಕ್ಷೆ ಎಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಡೆದಿದಿದ್ದು ಇದರ ಮೌಲ್ಯಮಾಪನ ಕೂಡಾ ಆಮೆಗತಿಯಲ್ಲಿ ಸಾಗುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆದಷ್ಟು ಶೀಘ್ರ ವಿಶ್ವವಿದ್ಯಾನಿಲಯದಿಂದ ಈ ಬಗ್ಗೆ ಸ್ಪಷ್ಟಿಕರಣ ಹಾಗೂ ವಿದ್ಯಾರ್ಥಿಗಳಿಗೆ ಆಗಸ್ಟ್ 11ರ ಒಳಗಾಗಿ ನ್ಯಾಯ ಒದಗಿಸದೇ ಇದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲಾಗುವುದು ಅಭಾವಿಪ ಕುಂದಾಪುರ ತಾಲೂಕು ಸಂಚಾಲಕ್ ಜಯಸೂರ್ಯ ಶೆಟ್ಟಿ ಎಚ್ಚರಿಕೆ ನೀಡಿದರು.

ಇದೇ ಸಂದರ್ಭ ಕುಂದಾಪುರದ ಉಪವಿಭಾಗಾಧಿಕಾರಿ ಕೆ. ರಾಜು ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ವೀಕ್ಷಿತ್, ವಿಘ್ನೇಶ್, ಬಸ್ರೂರು ಶಾರದಾ ಕಾಲೇಜಿನ ವೈಭವಿ, ರಂಜಿತ್, ರಾಹುಲ್, ಎಸ್.ಎಂ.ಎಸ್ ಕಾಲೇಜಿನ ನಿಶನ್, ಬಿ.ಬಿ. ಹೆಗ್ಡೆ ಕಾಲೇಜಿ‌ನ ದರ್ಶನ್ ಮೊದಲಾದವರಿದ್ದು ಕುಂದಾಪುರ ಭಂಡಾರ್ಕರ್ಸ್ ಕಾಲೇಜು, ಬಿ.ಬಿ ಹೆಗ್ಡೆ ಕಾಲೇಜು, ಕೋಟೇಶ್ವರ ವರದರಾಜ ಶೆಟ್ಟಿ ಸರ್ಕಾರಿ ಕಾಲೇಜು, ಶಾರದಾ ಕಾಲೇಜು ಬಸ್ರೂರು,‌ ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಶನಲ್ ಸರ್ಕಾರಿ ಪದವಿ ಕಾಲೇಜು ಬಾರ್ಕೂರು,‌ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Comments are closed.